2020-2021ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಡಾ.ರಾಜ್‍ಪ್ರಶಸ್ತಿಗೆ ಭಾಜನರಾದ ಡಾ.ಜಯಮಾಲಾ, ಸಾ.ರಾ.ಗೋವಿಂದು

- ಎಂ.ಎಸ್.ಸತ್ಯು, ಶಿವರುದ್ರಯ್ಯಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
- ಪ್ರಗತಿ ಅಶ್ವತ್ಥ, ಸುಂದರರಾಜ್‌ಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ
ಬೆಂಗಳೂರು: ಕರ್ನಾಟಕ ಸರ್ಕಾರ ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಇವು 2020 ಹಾಗೂ 2021ನೇ ಸಾಲಿನ ಪ್ರಶಸ್ತಿಗಳಾಗಿವೆ.

ಹಿರಿಯ ನಟಿ ಡಾ.ಜಯಮಾಲಾ, ಸಾ.ರಾ.ಗೋವಿಂದು ಅವರಿಗೆ ಡಾ.ರಾಜ್‍ಪ್ರಶಸ್ತಿ, ಎಂ.ಎಸ್.ಸತ್ಯು, ಕೆ.ಶಿವರುದ್ರಯ್ಯ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಹಿರಿಯ ಸಿನಿಮಾ ಛಾಯಾಗ್ರಾಹಕ ಪ್ರಗತಿ ಅಶ್ವತ್ಥನಾರಾಯಣ, ಎಂ.ಕೆ.ಸುಂದರರಾಜ್ ಅವರು ಡಾ.ವಿಷ್ಣುವರ್ಧನ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.
2020 ಹಾಗೂ 2021ರ ಜೀವಮಾನ ಸಾಧನೆ ಪ್ರಶಸ್ತಿಗಳ ಆಯ್ಕೆಗೆ ಹಿರಿಯ ಸಾಹಿತಿ, ಚಲನಚಿತ್ರ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯಲ್ಲಿ, ಹಿರಿಯ ಸಿನೆಮಾಟೋಗ್ರಾಫರ್ ಬಿ.ಎಸ್.ಬಸವರಾಜ, ಹಿರಿಯ ಪತ್ರಕರ್ತ ರಘುನಾಥ ಚ.ಹ., ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕಿ ಗಾಯತ್ರಿ ಹಾಗೂ ವಾರ್ತಾ ಇಲಾಖೆಯ ಆಯುಕ್ತರು ಸದಸ್ಯರಾಗಿದ್ದರು, ಸಮಿತಿಯು ವಿಸ್ತೃತವಾಗಿ ಚರ್ಚಿಸಿದ ಬಳಿಕ ಸರ್ಕಾರಕ್ಕೆ ಕಳುಹಿಸಿದ್ದ ಸಲಹೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನುಮೋದನೆ ನೀಡಿದ ಬಳಿಕ ಸರ್ಕಾರದ ಆದೇಶ ಪ್ರಕಟಿಸಲಾಗಿದೆ. ಈ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಹಾಗೂ ತಲಾ 5 ಲಕ್ಷ ರೂ.ಗಳ ನಗದು ಪುರಸ್ಕಾರ ಒಳಗೊಂಡಿದೆ.
ಪ್ರಶಸ್ತಿ ಪುರಸ್ಕೃತರ ಪರಿಚಯ: ಡಾ.ಜಯಮಾಲಾ- 2020 ರ ಡಾ.ರಾಜಕುಮಾರ್ ಪ್ರಶಸ್ತಿ: ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಾಯಕ ನಟಿ ಜಯಮಾಲಾ. ಪಣಂಬೂರಿನಲ್ಲಿ 1959ರ ಫೆಬ್ರವರಿ 28ರಂದು ಜನಿಸಿದರು. ತಂದೆ ಓಮಯ್ಯ, ತಾಯಿ ಕಮಲಮ್ಮ. ಅವರ ಹಿರಿಯ ಸಹೋದರಿ ರತ್ನಮಾಲಾ ಗಾಯಕ ಮತ್ತು ನಟಿ. ಕಾಲಾನಂತರ ಜಯಮಾಲಾ ಅವರ ತಂದೆ ಚಿಕ್ಕಮಗಳೂರಿಗೆ ವಲಸೆ ಬಂದು ನೆಲೆಸಿದರು. ಪ್ರವೃತ್ತಿಯಲ್ಲಿ ಓಮಯ್ಯ ಯಕ್ಷಗಾನ ಕಲಾವಿದ. ಮನೆಯಲ್ಲಿನ ಕಲೆಯ ವಾತಾವರಣ ಜಯಮಾಲಾ ಅವರಿಗೆ ನಟನೆಯೆಡೆಗಿನ ಆಸಕ್ತಿಗೆ ಪ್ರೇರಣೆಯಾಯಿತು. ಸಂಗೀತದಲ್ಲೂ ಅಪಾರ ಆಸಕ್ತಿ ಇದ್ದ ಜಯಮಾಲಾ ಶಾಲೆ – ಕಾಲೇಜಿನಲ್ಲಿ ಹಾಡುಗಾರಿಕೆಯಿಂದ ಗುರುತಿಸಿಕೊಂಡಿದ್ದರು.
ಮುಂದೆ ತಂದೆ ಅನಾರೋಗ್ಯಕ್ಕೀಡಾದಾಗ ಜಯಮಾಲಾ ಅವರಿಗೆ ದುಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಅಕ್ಕ ರತ್ನಮಾಲಾ ಜೊತೆ ಜಯಮಾಲಾ ಕೂಡ ನಾಟಕಗಳಲ್ಲಿ ಅಭಿನಯಿಸತೊಡಗಿದರು. ‘ಗೀತಾರಹಸ್ಯ’ ನಾಟಕ ಜಯಮಾಲಾ ಅವರಿಗೆ ಹೆಸರು ತಂದುಕೊಟ್ಟಿತು. ನಾಟಕಗಳಲ್ಲಿ ಜಯಮಾಲಾ ಅವರ ಪ್ರತಿಭೆಯನ್ನು ಗಮನಿಸಿದ ತುಳು ನಟ, ನಿರ್ಮಾಪಕ ಆನಂದಶೇಖರ್ ತಮ್ಮ ‘ಕಾಸ್ದಾಯೆ ಕಂಡನೆ’ ತುಳು ಚಿತ್ರದಲ್ಲಿ ಅವಕಾಶ ಕಲ್ಪಿಸಿದರು. ಮುಂದೆ ಜಯಮಲಾ ‘ಯಾನ್ ಸನ್ಯಾಸಿ ಆಪೆ’, ‘ಏರ್ ಮಲ್ತಿನ ತಪ್ಪು, ‘ಬಯ್ಯಮಲ್ಲಿಗೆ’ ತುಳು ಚಿತ್ರಗಳಲ್ಲಿ ಅಭಿನಯಿಸಿದರು.
ಜಯಮಾಲಾ ಕ್ಯಾಮೆರಾ ಎದುರಿಸಿದ ಮೊದಲ ಕನ್ನಡ ಸಿನಿಮಾ ‘ಬೂತಯ್ಯನ ಮಗ ಅಯ್ಯು’. ಮುಂದೆ ‘ಯಾರು ಹಿತವರು’ ಚಿತ್ರದಲ್ಲಿ ನಾಯಕಿಯಾಗಿ ಬಡ್ತಿ ಪಡೆದರು. ವರನಟ ಡಾ. ರಾಜಕುಮಾರ್ ಅವರ ‘ಪ್ರೇಮದ ಕಾಣಿಕೆ’ ಸಿನಿಮಾ ಜಯಾಮಾಲ ಅವರ ವೃತ್ತಿಬದುಕಿಗೆ ತಿರುವು ನೀಡಿತು. ಮುಂದೆ ರಾಜ್ ಅವರೊಂದಿಗೆ ಏಳು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದರು. ಜಯಮಾಲಾ ಅವರು ನಾಯಕನಟಿಯಾಗಿ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪಟ್ಟಿಯಲ್ಲಿ ತೆಲುಗು, ತುಳು, ತಮಿಳು – ಮಲಯಾಳಂ ಚಿತ್ರಗಳೂ ಇವೆ. ಎಂ.ಟಿ.ವಾಸುದೇವನಾಯರ್ ಅವರ ಮಲಯಾಳಂ ಸಿನಿಮಾ ‘ದೇವಲೋಗಂ’ ಅವರಿಗೆ ಹೆಸರು ತಂದುಕೊಟ್ಟಿತು. ಪೋಷಕ ಕಲಾವಿದೆಯಾಗಿಯೂ ಅವರು ಯಶಸ್ವಿ ನಟಿಯಾಗಿ ಗುರುತಿಸಿಕೊಂಡರು.
ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ತಾಯಿ ಸಾಹೇಬ’, ಜಯಮಾಲಾ ಅವರ ಪ್ರತಿಭೆಯ ಮತ್ತೊಂದು ಮಜಲನ್ನು ಪರಿಚಯಿಸಿತು. ಸ್ವರ್ಣಕಮಲ ರಾಷ್ಟ್ರ ಪ್ರಶಸ್ತಿ ಗಳಿಸಿದ ಸಿನಿಮಾ ಹತ್ತಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹತ್ತು – ಹಲವು ಪ್ರಶಸ್ತಿಗಳನ್ನು ಗಳಿಸಿತು. ಪ್ರೇಮದ ಕಾಣಿಕೆ, ಗಿರಿಕನ್ಯೆ, ಬಡವರ ಬಂಧು, ತ್ರಿಮೂರ್ತಿ, ಸಂಗೀತ, ಖಂಡವಿದೆಕೋ ಮಾಂಸವಿದೆಕೋ, ಗಂಗವ್ವ ಗಂಗಾಮಾಯಿ, ಅಂತ, ಚಂಡಿಚಾಮುಂಡಿ, ಮುತ್ತಿನಂಥ ಅತ್ತಿಗೆ, ನಾಗ ಕಾಳ ಭೈರವ, ಜನ್ಮಜನ್ಮದ ಅನುಬಂಧ.. ಅವರ ಕೆಲವು ಪ್ರಮುಖ ಸಿನಿಮಾಗಳು.
ಚಿತ್ರೋದ್ಯಮದ ಒಳಹೊರಗುಗಳನ್ನು ಅರಿತ ಅವರು ಚಿತ್ರ ನಿರ್ಮಣದಲ್ಲೂ ಸೈ ಎನಿಸಿಕೊಂಡರು. ಅಗ್ನಿಪರೀಕ್ಷೆ, ಮಹೇಂದ್ರವರ್ಮ, ಮಿ.ಮಹೇಶ್ ಕುಮಾರ್, ತಾಯಿ ಸಾಹೇಬ, ತುತ್ತೂರಿ… ಅವರ ನಿರ್ಮಾಣದ ಚಿತ್ರಗಳು. ರಾಜಕೀಯ ಕ್ಷೇತ್ರದಲ್ಲೂ ಯಶಸ್ವಿಯಾದ ಜಯಮಾಲಾ ಅವರು ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಚಿಕ್ಕಂದಿನಲ್ಲಿ ಓದಲು ಸಾಧ್ಯವಾಗದಿದ್ದ ಅವರು ಮುಂದೆ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದರು. 2008ರಲ್ಲಿ ಪಿಎಚ್ ಡಿ ಪದವಿ ಗಳಿಸಿದರು.
ಸಾ.ರಾ.ಗೋವಿಂದುಗೆ 2021 ರ ಡಾ.ರಾಜಕುಮಾರ್ ಪ್ರಶಸ್ತಿ: ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಗ್ರಾಮದಲ್ಲಿ 1953 ರ ಜುಲೈ 13 ರಂದು ರಾಮೇಗೌಡ ಹಾಗೂ ಹನುಮಮ್ಮ ಅವರ ಉದರದಲ್ಲಿ ಜನಿಸಿದ ಗೋವಿಂದು ಅವರು, ಹಾಸನದಲ್ಲಿ ಡಿಪ್ಲೊಮಾ ಮೆಕ್ಯಾನಿಕಲ್ ತರಬೇತಿ ಪಡೆದ ಅವರು, ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಅವರು ತಮ್ಮ ಸ್ವಗ್ರಾಮ ಸಾಲಿಗ್ರಾಮದ ಸುಬ್ರಹ್ಮಣ್ಯ ಅವರ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು. ಇವರ ಸಹಪಾಠಿ ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ ಎಸ್.ಎ.ಗೋವಿಂದರಾಜ ಅವರ ಮೂಲಕ ಡಾ.ರಾಜಕುಮಾರ್ ಅವರ ನಿರ್ಮಾಣ ಸಂಸ್ಥೆ ಪೂರ್ಣಿಮಾ ಎಂಟರ್ ಪ್ರೈಸಸ್‍ನ ಮೊದಲ ಚಿತ್ರ ‘ತ್ರಿಮೂರ್ತಿʼ ಚಲನಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡರು.
ಡಾ.ರಾಜ್ ನಿರ್ಮಾಣ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಡಾ.ರಾಜ್ ಅಭಿಮಾನಿಗಳ ಸಂಘವನ್ನು ಬಲಗೊಳಿಸಿದರು. ರಾಜ್ಯದಾದದ್ಯಂತ ಸುಮಾರು 17 ಸಾವಿರ ಘಟಕಗಳನ್ನು ಸ್ಥಾಪಿಸಿ, ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕನ್ನಡ ನೆಲ, ಜಲ, ನಾಡು, ನುಡಿಯ ವಿಷಯದಲ್ಲಿ ಹೋರಾಡಿದರು. ತನು ಚಿತ್ರ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆ ಮೂಲಕ ಏಳು ಸುತ್ತಿನ ಕೋಟೆ, ಲಾಲಿ ಹಾಡು ಸೇರಿದಂತೆ ಸುಮಾರು 16 ಚಿತ್ರಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಎರಡು ಅವಧಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಡಾ.ರಾಜ್ ಹೆಸರಿನ ಪ್ರಶಸ್ತಿಯನ್ನು ಪಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು ಈ ಪ್ರಶಸ್ತಿಯನ್ನು ಡಾ.ರಾಜಕುಮಾರ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ಎಂ.ಎಸ್.ಸತ್ಯು -2020 ರ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಎಂ. ಎಸ್. ಸತ್ಯು ಎಂದೇ ಹೆಸರಾಗಿರುವ ಮೈಸೂರು ಶ್ರೀನಿವಾಸ ಸತ್ಯು ಅವರು ಪ್ರಸಿದ್ಧ ಭಾರತೀಯ ಚಿತ್ರ ನಿರ್ದೇಶಕ, ಚಿತ್ರಕಥಾ ಬರಹಗಾರ ಮತ್ತು ರಂಗಭೂಮಿ ಕಾರ್ಯಕರ್ತ. ಸಾಮಾಜಿಕ ನ್ಯಾಯ, ಶೋಷಿತ ವರ್ಗಗಳ ಬದುಕು, ಮಾನವೀಯ ಮೌಲ್ಯಗಳು ಅವರ ಚಿತ್ರಗಳ ಮುಖ್ಯ ವಿಷಯಗಳು.
ಮೈಸೂರಿನಲ್ಲಿ 1930 ಜುಲೈ 06 ರಂದು ಜನಿಸಿದ ಮೈಸೂರು ಶ್ರೀನಿವಾಸ ಸತ್ಯು, ಅವರಿಗೆ ಚಿಕ್ಕಂದಿನಿಂದಲೂ ರಂಗಭೂಮಿಯ ಕಡೆ ಒಲವು. ರಂಗಭೂಮಿಯ ಸ್ಟೇಜ್ ಡಿಸೈನರ್. ಕಲಾನಿರ್ದೇಶಕ, ರಂಗಭೂಮಿಯಲ್ಲಿ ನಾಲ್ಕುದಶಕಗಳಿಗೂ ಹೆಚ್ಚು ಕಾಲ ಶ್ರಮಿಸಿರುವ ಎಂ.ಎಸ್.ಸತ್ಯು ಹಿಂದೂಸ್ತಾನಿ ಥಿಯೇಟರ್, ಹಬೀಬ್ ತನ್ನೀರ್ ಅವರ ಥೀಯೇಟರ್ ಹಾಗೂ ದೆಹಲಿಯ ಕನ್ನಡ ಭಾರತಿ ಹಾಗೂ ಇತರ ತಂಡಗಳಲ್ಲಿ ರಂಗಭೂಮಿ ಡಿಸೈನರ್ ಹಾಗೂ ಕಲಾನಿರ್ದೇಶಕರಾಗಿ ಕೆಲಸ ಮಾಡಿದರು. 1952 ರಲ್ಲಿ ಚೇತನ್ ಆನಂದ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಎಂ.ಎಸ್.ಸತ್ಯು, ಚೇತನ್ ಆನಂದ್ ಅವರು ನಿರ್ದೇಶಿಸಿದ “ಹಖೀಕತ್” ಚಲನಚಿತ್ರದ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ಇದು ಅವರ ವೃತ್ತಿ ಬದುಕಿಗೆ ತಿರುವು ನೀಡಿತು. ಈ ಚಿತ್ರದ ಕಲಾನಿರ್ದೇಶನಕ್ಕಾಗಿ ಅವರಿಗೆ ಫಿಲಂ ಫೇರ್ ಪ್ರಶಸ್ತಿ ಲಭಿಸಿತು.
15 ಸಾಕ್ಷ್ಯ ಚಿತ್ರಗಳು ಹಾಗೂ ಎಂಟು ಕಥಾಚಿತ್ರಗಳನ್ನು ನಿರ್ದೇಶಿಸಿರುವ ಎಂ.ಎಸ್.ಸತ್ಯು, ಕನ್ನಡ, ಹಿಂದಿ ಹಾಗೂ ಉರ್ದು ಭಾμÉಗಳಲ್ಲಿ ಚಲನಚಿತ್ರಗಳನ್ನು ಮಾಡಿರುವುದು ಅವರ ವೈಶಿಷ್ಟವೇ ಆಗಿದೆ. 1974 ರಲ್ಲಿ ಅವರು ನಿರ್ದೇಶಿಸಿದ ಭಾರತ ವಿಭಜನೆ ಕಾಲದ ಕಥಾಹಂದರವುಳ್ಳ ಚಿತ್ರ “ಗರಂ ಹವಾ” ಎಂಎಸ್.ಸತ್ಯು ಅವರನ್ನು ಶ್ರೇಷ್ಠ ನಿರ್ದೇಶಕರ ಸ್ಥಾನದಲ್ಲಿ ನಿಲ್ಲಿಸಿತು. ಈ ಚಿತ್ರಕ್ಕೆ 1974 ರಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಅತ್ಯುತ್ತಮ ಕಥಾಚಿತ್ರಕ್ಕೆ ನೀಡುವ ನರ್ಗೀಸ್ ದತ್ ರಾಷ್ಟ್ರೀಯ ಪ್ರಶಸ್ತಿ ನೀಡಿದೆ. ಅಲ್ಲದೆ “ಗರಂ ಹವಾ” ವಿಶ್ವದ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿತ್ತು.
ಸಾಂಪ್ರದಾಯಿಕ ನಿರೂಪಣಾ ಮಾರ್ಗವನ್ನು ಬಿಟ್ಟು ತಾತ್ವಿಕ ನೆಲೆಗಟ್ಟಿನ, ವಸ್ತುನಿಷ್ಠ ನಿರೂಪಣೆಗೆ ಹೆಸರಾದವರು ಎಂ.ಎಸ್.ಸತ್ಯು. ಏಕ್ ಥ ಚೋಟು, ಏಕ್ ಥಾ ಮೋಟು, ಗರಂಹವಾ, ಚಿತೆಗೂ ಚಿಂತೆ, ಕನ್ನೇಶ್ವರ ರಾಮ, ಕಹಾಂ ಕಹಾಂ ಸೇ ಗುಜರ್ಗಯಾ, ಬರ, ಇಜ್ಯೋಡು, ಸೂಖ, ಘಳಿಗೆ, ಕೊಟ್ಟ ಅವರು ನಿರ್ದೇಶಿಸಿದ ಚಲನಚಿತ್ರಗಳು. “ಕಾಕನ ಕೋಟೆ” ಚಲನಚಿತ್ರದ ಕಲಾನಿರ್ದೇಶಕರಾಗಿ ಅವರು ಕೆಲಸ ಮಾಡಿದ್ದಾರೆ. “ಬರ” ಚಿತ್ರದ ನಿರ್ದೇಶನಕ್ಕಾಗಿ ಸತ್ಯು ಅವರು 1981-82 ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರರಂಗಕ್ಕೆ ಎಂ.ಎಸ್.ಸತ್ಯು ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು 1975 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. 2024 ರಲ್ಲಿ ನಡೆದ 15 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ.
ಶಿವರುದ್ರಯ್ಯ ಕೆ. – 2021 ರ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಇಂದಿನ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯಲ್ಲಿ 1953 ರ ಮೇ 15 ರಂದು ಕುನ್ನಯ್ಯ ಹಾಗೂ ತಿರುಮಲಮ್ಮ ನವರ ಪುತ್ರನಾಗಿ ಜನಸಿದ ಶಿವರುದ್ರಯ್ಯ ಅವರು ಈ ಹಿಂದೆ ವಾರ್ತಾ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. ಚಲನಚಿತ್ರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ದೇವನೂರು ಮಹದೇವ, ಸಾಯಿಸುತೆ, ಅಶ್ವತ್ಥ, ಕೆ.ಸದಾಶಿವ, ಕುಂ.ವೀರಭದ್ರಪ್ಪ, ಈಶ್ವರಚಂದ್ರ, ಚಾಲ್ರ್ಸ್ ಡಿಕೆನ್ಸನ್ ಸೇರಿದಂತೆ ಹಲವು ಲೇಖಕರ ಕೃತಿಗಳನ್ನಾಧರಿಸಿ ಸುಮಾರು 11 ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ಹಲವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರಕಿವೆ. ವನ್ಯಜೀವಿ ಛಾಯಾಗ್ರಾಹಣ ಹಾಗೂ ರಂಗಭೂಮಿ ಕ್ಷೇತ್ರದಲ್ಲಿಯೂ ಗಮನಾರ್ಹ ಕಾರ್ಯಗಳನ್ನು ನಿರ್ವಹಿಸಿದ್ದಾರೆ.
ಪ್ರಗತಿ ಅಶ್ವತ್ಥನಾರಾಯಣ -2020 ರ ಡಾ.ವಿಷ್ಣುವರ್ಧನ್ ಪ್ರಶಸ್ತಿ: ಪ್ರಗತಿ ಅಶ್ವತ್ಥ ನಾರಾಯಣ-ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ; ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರ ಜಗತ್ತಿನ ಭಾಗವಾಗಿದ್ದು ‘ಪ್ರಗತಿ’ಯ ಹೆಮ್ಮೆ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ ‘ಬೆಳ್ಳಿಮೋಡ’ ಚಿತ್ರದೊಂದಿಗೆ. ಅವರು ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ ‘ಪ್ರೇಮ ಪ್ರೇಮ ಪ್ರೇಮ’. ‘ಪ್ರಗತಿ’ ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೊಗ್ರಫಿ ಮಾಡಿದ್ದಾರೆ. ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೊಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹನ್ನೊಂದು, ಸಿದ್ದಲಿಂಗಯ್ಯನವರ ಹದಿನಾಲ್ಕು ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಪ್ರಗತಿ’ಯಲ್ಲಿ ಹತ್ತಾರು ಸ್ಟಿಲ್ ಫೋಟೊಗ್ರಾಫರ್ ಗಳು ತಯಾರಾಗಿದ್ದಾರೆ. ಮೈಲುಗಲ್ಲು ಎನಿಸಿದ ಹಲವಾರು ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿರುವ ಅಶ್ವತ್ಥರ ಸಂಗ್ರಹದಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಫೋಟೊ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೊ, ಚಿತ್ರೀಕರಣ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ-ನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು… ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೊಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.
ಎಂ.ಕೆ.ಸುಂದರರಾಜ್ -2021 ರ ಡಾ.ವಿಷ್ಣುವರ್ಧನ್ ಪ್ರಶಸ್ತಿ: ಹಿರಿತೆರೆ ಹಾಗೂ ಕಿರುತೆರೆಗಳೆರಡರಲ್ಲಿಯೂ ಎಂ.ಕೆ.ಸುಂದರರಾಜ್ ಚಿರಪರಿಚಿತರು, 1951 ರ ಫೆಬ್ರವರಿ 2 ರಂದು ವಿಜಯ ಕೋಮಲಂ ಹಾಗೂ ಎಂ.ಎನ್.ಕೃಷ್ಣಸ್ವಾಮಿ ಅವರ ಮಗನಾಗಿ ಜನಿಸಿದರು. ಬಿಎಸ್ಸಿ ಪದವೀಧರರಾಗಿರುವ ಇವರು, ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ, ರಂಗಭೂಮಿ ದಿಗ್ಗಜ ಬಿ.ವಿ.ಕಾರಂತರ ಪರಿಚಯವಾಗಿ ಅವರ ಶಿಷ್ಯತ್ವದಲ್ಲಿ ಅನೇಕ ನಾಟಕಗಳಲ್ಲಿ ನಟನೆ, ನೇಪಥ್ಯದಲ್ಲಿ ಕರ್ತವ್ಯ ನಿರ್ವಹಿಸಿದರು. ಪ್ರಯೋಗಾತ್ಮಕ ಮತ್ತು ಮುಖ್ಯವಾಹಿನಿ ಎರಡೂ ಪ್ರಕಾರಗಳ ಚಿತ್ರಗಳಲ್ಲಿ ಅಪಾರ ಯಶಸ್ಸು ಪಡೆದಿದ್ದಾರೆ. 1973 ರಲ್ಲಿ ಚಿತ್ರರಂಗ ಪ್ರವೇಶಿಸಿದರು, ಕನ್ನಡ, ತಮಿಳು, ತೆಲುಗು,ಹಿಂದಿ ಸೇರಿದಂತೆ ಈವರೆಗೆ ಸುಮಾರು 300 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ಸಹನಿರ್ದೇಶನ, ನಿರ್ಮಾಣ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಅಭಿನಯದ ಕಾಡು, ಚೋಮನ ದುಡಿ, ತಬ್ಬಲಿಯು ನೀನಾದೆ ಮಗನೇ, ಒಂದಾನೊಂದು ಕಾಲದಲ್ಲಿ ಸೇರಿದಂತೆ ನೂರಾರು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳು ಮಾತ್ರವಲ್ಲದೇ, ಹಾಸ್ಯ, ಖಳ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಮುಖ ಪ್ರಶಸ್ತಿ, ಪುರಸ್ಕಾರಗಳ ಗೌರವಕ್ಕೆ ಪಾತ್ರರಾಗಿದ್ದಾರೆ.
Related









