NEWSಕೃಷಿಮೈಸೂರು

ಬಾರ್ ಕೌನ್ಸಿಲ್‌ನಿಂದ ವಕೀಲ ವಿ.ರವಿಕುಮಾರ್ ಅಮಾನನತಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಖಂಡನೆ: ಹೋರಾಟದ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ವಕೀಲ ವಿ.ರವಿಕುಮಾರ್ ಅವರನ್ನು ಬಾರ್ ಕೌನ್ಸಿಲ್‌ನಿಂದ ಅಮಾನತು ಮಾಡಿರುವುದು ಖಂಡನೀಯ ಕ್ರಮ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಖಂಡಿಸಿದೆ.

ಪರಿಸರ ಹೋರಾಟಗಾರ ವಕೀಲ ರವಿಕುಮಾರ್ ನಾಡಿನ ನೆಲ – ಜಲ, ಕಾಡು, ಪ್ರಾಣಿ ಮತ್ತು ಪರಿಸರ ಸಂರಕ್ಷಣೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಅಲ್ಲದೆ ರೈತ ಪರ ಕಾಳಜಿ ಹೊಂದಿರುವ ಮೈಸೂರಿನ ಹಿರಿಯ ವಕೀಲರಾದ ಇವರನ್ನು ಬಾರ್‌ ಕೌನ್ಸಿಲ್‌ನಿಂದ ಅಮಾನತು ಗೊಳಿಸಿರುವುದನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ರವಿಕುಮಾರ್ ಅವರು ಕೇವಲ ವಕೀಲರಲ್ಲ, ಅವರು ಒಬ್ಬ ಕೃಷಿಕರು, ಈ ನಾಡಿನ ಆಸ್ತಿ. ಕಬಿನಿ ಹಿನ್ನೀರಿನ ಉಳಿವಿಗಾಗಿ, ಭೂಗಳ್ಳರು ಮತ್ತು ರೆಸಾರ್ಟ್ ಮಾಫಿಯಗಳ ವಿರುದ್ಧ ಅವರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ನಡೆಸಿರುವ ಷಡ್ಯಂತ್ರ ಇದಾಗಿದೆ. ಸತ್ಯ ಮತ್ತು ನ್ಯಾಯದ ಪರವಾಗಿ ದ್ವನಿ ಎತ್ತುವ ವಕೀಲರ ಬಾಯಿ ಮುಚ್ಚಿಸುವ ಕೆಲಸವನ್ನು ಬಾರ್ ಕೌನ್ಸಿಲ್ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ.

ಇನ್ನು ಭ್ರಷ್ಟರ ವಿರುದ್ಧ ಹೋರಾಡುವ ರವಿಕುಮಾರ್ ಅವರಂತಹ ವಕೀಲರಿಗೆ ರಕ್ಷಣೆ ನೀಡಬೇಕಾದ ವ್ಯವಸ್ಥೆಯೇ ಇಂದು ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದು ದುರದೃಷ್ಟಕರ. ಇದನ್ನು ರೈತ ಸಮುದಾಯ ಸಹಿಸುವುದಿಲ್ಲ. ರಾಜ್ಯ ವಕೀಲರ ಪರಿಷತ್ತು ತಕ್ಷಣವೇ ಎಚ್ಚೆತ್ತುಕೊಂಡು ವಕೀಲ ವಿ. ರವಿಕುಮಾರ್ ಅವರ ಮೇಲಿನ ಅಮಾನತು ಆದೇಶವನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ನೋಡಿ ಒಂದು ವೇಳೆ ಆದೇಶವನ್ನು ಹಿಂಪಡೆಯದಿದ್ದಲ್ಲಿ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ವಿವಿಧ ರೈತಪರ ಸಂಘಟನೆಗಳು ಹಾಗೂ ಪರಿಸರಪರ ಸಂಘಟನೆಗಳ ನೇತೃತ್ವದಲ್ಲಿ ಮೈಸೂರು ನ್ಯಾಯಾಲಯದ ಮುಂದಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸತ್ಯದ ಪರವಿರುವ ರವಿಕುಮಾರ್ ಅವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಅತ್ತಹಳ್ಳಿ ದೇವರಾಜ್ ಹಾಗೂ ಬರಡನಪುರ ನಾಗರಾಜ್ ಎಚ್ಚರಿಸಿದ್ದಾರೆ.

Megha
the authorMegha

Leave a Reply

error: Content is protected !!