ಬೆಂಗಳೂರು: ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಹೊರಟಿರುವ ನಡೆ ಖಂಡಿತ ಒಪ್ಪಲು ಸಾಧ್ಯವಿಲ್ಲ, ಈ ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಇಂದು ಬಿಡಿಎ ಆಯುಕ್ತ ಶಾಂತರಾಜು ಅವರನ್ನು ಭೇಟಿ ಮಾಡಿದ ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ನಾಗೇಶ್, ಲಿಂಗರಾಜು ಅವರ ನಿಯೋಗದೊಂದಿಗೆ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಮಾಧ್ಯಮ ಮುಖ್ಯಸ್ಥ ಅನಿಲ್ ನಾಚಪ್ಪ ಹಾಗೂ ಇನ್ನಿತರ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ಆಗ್ರಹಿಸಿದರು.
ಇನ್ನು ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್ ನಾಚಪ್ಪ, ಸರ್ಕಾರವೇ ಮುಂದೆ ನಿಂತು ಈ ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಿಸಿ ಅಲ್ಲಿ ಅನೇಕ ವರ್ಷಗಳಿಂದ ವ್ಯಾಪಾರಗಳನ್ನು ಮಾಡುತ್ತಿರುವ 800 ಕುಟುಂಬಗಳ ರಕ್ಷಣೆಗೆ ನಿಲ್ಲಬೇಕೆಂದು ಎಂದರು.
ನಮ್ಮ ಪಕ್ಷವು ಈ ಬಿಡಿಎ ವಾಣಿಜ್ಯ ಸಂಕೀರ್ಣಗಳ ಉಳಿವಿಗಾಗಿ ಈಗಾಗಲೇ ಅನೇಕ ಹೋರಾಟಗಳನ್ನು ನಡೆಸುತ್ತಿದೆ. ಮುಂಬರುವ ದಿವಸಗಳಲ್ಲಿ ಸರ್ಕಾರವು ತನ್ನ ನಡೆಯನ್ನು ಬದಲಿಸದಿದ್ದಲ್ಲಿ ಮತ್ತೆ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಕ್ಷದ ಮುಖಂಡರಾದ ಗೋಪಾಲ್, ಪುಟ್ಟಣ್ಣ ಗೌಡ ಸೇರಿದಂತೆ ಅನೇಕ ಮಳಿಗೆ ಮಾಲೀಕರು ಹಾಗೂ ಕನ್ನಡಪರ ಸಂಘಟನೆಗಳ ಸದಸ್ಯರು ಇದ್ದರು.