ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರೊಬ್ಬರ ಪರವಾಗಿ ಸಾಕ್ಷಿ ಹೇಳಲು ಬಂದ ಸಾರ್ವಜನಕರೊಬ್ಬರನ್ನು ಸಂಸ್ಥೆಯ ಸಿಬ್ಬಂದಿಯೊಬ್ಬ ಅವಮಾನಿಸಿದ್ದು, ಇದರಿಂದ ನೊಂದ ವ್ಯಕ್ತಿ ಆ.23ರಂದು ಅಂದರೆ ನಿನ್ನೆ ಶುಕ್ರವಾರ KSRTC ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ತಿಂಗಳ ಹಿಂದೆ ಕಬ್ಬಳ್ಳಿಯಲ್ಲಿ ಒಂದು ಅಪಘಾತ ಸಂಭವಿಸಿತ್ತು ಈ ಸಂಬಂಧ ಸಾಕ್ಷಿ ನುಡಿಯಲು ಬಂದ ಆ ವ್ಯಕ್ತಿಯನ್ನು ನಿಗಮದ ಚಾಮರಾಜನಗರದ ಶಿಸ್ತು ಶಾಖೆಯ ಮೇಲ್ವಿಚಾರಕ ಮಹೇಂದ್ರ ಕುಮಾರ್ ಅವಮಾನಿಸಿದ್ದಾನೆ. ಈ ಬಗ್ಗೆ ಮನನೊಂದು ಎಂಡಿ ಅವರಿಗೆ ಇ-ಮೇಲ್ ಮೂಲಕ ಲಿಖಿತ ದೂರು ನೀಡಿ ತನಗಾದ ಅವಮಾನ ಬೇರೆ ಯಾರಿಗೂ ಆಗಬಾರದು. ಹೀಗಾಗಿ ಇಂಥ ಸಿಬ್ಬಂದಿ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಂಜನಗೂಡು ತಾಲೂಕಿನ ಕಾಂಗ್ರೆಸ್ ಪಕ್ಷದ ಯಂಗ್ ಬ್ರಿಗೇಡ್‌ನ ಸೇವಾದಳದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಂಬುವರೆ ಎಂಡಿ ಅನ್ಬುಕುಮಾರ್ ಅವರಿಗೆ ದೂರು ಕೊಟ್ಟವರು. ಆ ದೂರಿನಲ್ಲಿ, ಶಿವಕುಮಾರ್ ಆದ ನಾನು ಸಾರಿಗೆ ಸಂಸ್ಥೆ ಬಗ್ಗೆ ಹೆಮ್ಮೆ-ಅಭಿಮಾನವನ್ನು ಇಟ್ಟುಕೊಂಡಿರುವ ವ್ಯಕ್ತಿ.
ಸಾರ್ವಜನಿಕರು, ಪ್ರಯಾಣಿಕರನ್ನು ಆದ್ಯತೆ-ಆದರದಿಂದ ಕಾಣುವ ಸಂಸ್ಥೆ ಎಂದರೆ ಅದು ನನ್ನ ಹೆಮ್ಮೆಯ ಸಾರಿಗೆ ಸಂಸ್ಥೆ ಎಂದು ಭಾವಿಸಿದ್ದೇನೆ. ಆದರೆ, ನಾನು ಸಾರ್ವಜನಿಕನಾಗಿ ತಮ್ಮ ಇಲಾಖಾ ವಿಚಾರಣೆಯೊಂದಕ್ಕೆ ಚಾಲಕರೊಬ್ಬರ ಪರ ಸಾಕ್ಷಿ ನುಡಿಯಲು ಚಾಮರಾಜನಗರ ವಿಭಾಗಕ್ಕೆ 26/07/24 ಮತ್ತು 23/08/24 ರಂದು ಭೇಟಿ ಮಾಡಿದ್ದಾಗ ಮಹೇಂದ್ರ ಕುಮಾರ್ ಎಂಬ ಶಿಸ್ತು ಶಾಖೆಯ ಮೇಲ್ವಿಚಾರಕ ನನ್ನನ್ನು ನಿಮ್ಮನ್ನು ನೋಡಿದರೆ ತಿಳಿಯುತ್ತೆ, ಸುಳ್ಳು ಸಾಕ್ಷ್ಯ ನುಡಿಯಲು ಹಣ ಪಡೆದು ಬಂದಿದ್ದೀರಿ ಎಂದು ಅವಮಾನಿಸಿದರು.
ಅಲ್ಲದೆ ಕಬ್ಬಳ್ಳಿಯಲ್ಲಿ ಆದ ಅಪಘಾತವನ್ನು ನಿಮ್ಮೂರಲ್ಲಿ ಹೇಗೆ ಕುಳಿತು ನೋಡಿದಿರಿ? ಎಂಬಿತ್ಯಾದಿ ನಿಂದನೆಯ ಮಾತುಗಳನ್ನಾಡಿ ನನ್ನ ಮೈಬಣ್ಣ ಬಗ್ಗೆ, ನನ್ನ ಪ್ರಾಮಾಣಿಕತೆಯ ಬಗ್ಗೆ ಕ್ಷುಲ್ಲಕವಾಗಿ ನಡೆದುಕೊಂಡರು ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ಆ.23ರಂದು ಮಾಡಿರುವ ಇ-ಮೇಲ್ ದೂರಿನಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರೊಂದಿಗೆ ಸುಮಧುರ ಬಾಂಧವ್ಯ ಹೊಂದಿರುವ ಈ ಸಂಸ್ಥೆಯಲ್ಲಿ, ಸಾರ್ವಜನಿಕರೊಂದಿಗೆ ಇಷ್ಟು ಕಟುವಾಗಿ ಮಾತನಾಡುವ ವ್ಯಕ್ತಿಗಳು ಕಳಂಕವೆಂದು ಭಾವಿಸಿ, ಮಹೇಂದ್ರ ಕುಮಾರ್ ಎಂಬ ಮೇಲ್ವಿಚಾರಕರ ಮೇಲೆ ಸೂಕ್ತ ಕ್ರಮವಹಿಸಬೇಕೆಂದು ಕೋರುತ್ತ ನಿಮಗೆ ಈ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಸಂಸ್ಥೆಯ ಚಾಮರಾಜನಗರ ವಿಭಾಗದಲ್ಲಿರುವ ಈ ಮಹೇಂದ್ರ ಕುಮಾರ್ ಎಂಬಾತನಿಗೆ ಶಿಸ್ತು ಶಾಖೆಯಲ್ಲಿ ಅರ್ಹ ನಾಲ್ಕು ಮಂದಿ (Supervisor) ಮೇಲ್ವಿಚಾರಕರಿದ್ದರೂ ಅವರನ್ನು ಬೇರೆ ಕೆಲಸಕ್ಕೆ ನಿಯೋಜಿಸಿ ಎಸ್‌ಡಿಎ ಆಗಿರುವ ಈ ಮಹೇಂದ್ರ ಕುಮಾರ್‌ನನ್ನು ಮೇಲ್ವಿಚಾರಕನನ್ನಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಘಟಕ ಮಟ್ಟದ ಅಧಿಕಾರಿಗಳು ತಮ್ಮ ಲಾಭಕ್ಕಾಗಿ ನಿಯೋಜಿಸಿಕೊಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಈ ಮಹೇಂದ್ರ ಕುಮಾರ್‌ನಿಗೆ ಶಿಸ್ತು ಶಾಖೆಯ ಮೇಲ್ವಿಚಾರಕನನ್ನಾಗಿ ಮಾಡಿದ್ದು ಈಗ ಮೈಸೂರು ವಿಭಾಗದಲ್ಲಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರು. ಈ ಹಿಂದೆ ಚಾಮರಾಜನಗರದಲ್ಲಿ ಇದ್ದ ಇವರನ್ನು ಮೈಸೂರಿಗೆ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಮಹೇಂದ್ರ ಕುಮಾರ್‌ನನ್ನು ಶಿಸ್ತು ಶಾಖೆಯ ಮೇಲ್ವಿಚಾರಕನಾಗಿ ನಿಯೋಜಿಸಿದ್ದಾರೆ. ಆದರೆ ವರ್ಗಾವಣೆ ಸಮಯದಲ್ಲಿ ಡಿಸಿಗಳು ಈ ರೀತಿ ಮಾಡಲು ಬರುವುದಿಲ್ಲ.
ಆದರೆ, ಹಿಂದಿನ ದಿನಾಂಕವನ್ನು ಬರೆದು ಈ ರೀತಿ ನಿಯೋಜನೆ ಮಾಡಿ ಹೋಗಿದ್ದಾರೆ ಎಂದು ಆರೋಪವನ್ನು ಚಾಮರಾಜನಗರ ವಿಭಾಗದಲ್ಲಿರುವ ಹೆಸರೇಳಲಿಚ್ಛಿಸದ ಅಧಿಕಾರಿಗಳೇ ಮಾಡುತ್ತಿದ್ದಾರೆ. ಇನ್ನು ಈತನ ಆರ್ಭಟಕ್ಕೆ ವಿಭಾಗದಲ್ಲಿರುವ ಕೆಲ ಅಧಿಕಾರಿಗಳೇ ಭಯಪಡುತ್ತಿದ್ದಾರಂತೆ.
ಮಹೇಂದ್ರ ಕುಮಾರ್‌ನ ಪ್ರಮುಖ ಕೆಲಸ ಶಿಸ್ತುಪಾಲನೆ ಮೇಲ್ವಿಚಾರಣೆ ಮಾಡುವುದು. ಆದರೆ ಅದನ್ನು ಬಿಟ್ಟು ಮೇಲಧಿಕಾರಿಗಳಿಗೆ ಹತ್ತಿರವಾಗುವ ಎಲ್ಲ ಕೆಲಸವನ್ನು ಮಾಡುತ್ತಾನೆ ಈತ ಎಂಬ ಆರೋಪವು ವಿಭಾಗದಲ್ಲಿ ಕೇಳಿ ಬರುತ್ತಿದೆ. ಇಂಥ ವ್ಯಕ್ತಿ ಚಾಲಕರೊಬ್ಬರ ಪರವಾಗಿ ಸಾಕ್ಷಿ ನುಡಿಯಲು ಬಂದ ಸಾರ್ವಜನಿಕರೊಂದಿಗೆ ಈ ರೀತಿ ನಡೆದುಕೊಂಡಿರುವುದರಲ್ಲಿ ಅಚ್ಚರಿ ಏನಿಲ್ಲ. ಈತನ ನಡೆಯೇ ಹೀಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಶಿವಕುಮಾರ್ ಅವರು ಕೊಟ್ಟಿರುವ ದೂರಿಗೆ ಎಂಡಿ ಅನ್ಬುಕುಮಾರ್ ಅವರು ಯಾವರೀತಿ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.