NEWSನಮ್ಮಜಿಲ್ಲೆಮೈಸೂರು

ತಿ.ನರಸೀಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2026ರ ದಿನದರ್ಶಿಕೆ ಬಿಡುಗಡೆ

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ಪತ್ರಕರ್ತರ ಭವನ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದರೆ ಹಾಗೂ ಸಮಾಜದಲ್ಲಿ ಪತ್ರಕರ್ತರ ಗೌರವ–ಘನತೆ ಹೆಚ್ಚಬೇಕಾದರೆ, ತಾಲೂಕಿನ ಜನತೆ ಸಮರ್ಪಕವಾಗಿ ಪತ್ರಕರ್ತರ ಭವನವನ್ನು ಬಳಸಿಕೊಳ್ಳಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮೀಪ ಇರುವ ತಿ.ನರಸೀಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಂಘವು ಹೊರತಂದಿರುವ 2026ರ ದಿನದರ್ಶಿಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಪತ್ರಕರ್ತರ ಸಂಘದ ಆರ್ಥಿಕ ಬಲವರ್ಧನೆಗೆ ಜನಸಾಮಾನ್ಯರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಲ್ಕ ಪಾವತಿಸಿ ಪತ್ರಿಕಾಗೋಷ್ಠಿ ನಡೆಸುವುದು, ಪತ್ರಿಕಾ ಪ್ರಕಟಣೆ ನೀಡುವುದು ಹಾಗೂ ಸಣ್ಣಪುಟ್ಟ ಸಭೆ–ಸಮಾರಂಭಗಳನ್ನು ಆಯೋಜಿಸುವುದರಿಂದ ಸಂಘದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಒಂದು ಸಂಘ ಆರ್ಥಿಕವಾಗಿ ಬಲಿಷ್ಠವಾಗಿದ್ದರೆ, ಅದು ಪರೋಕ್ಷವಾಗಿ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಪಡೆಯುತ್ತದೆ ಎಂಬ ನಂಬಿಕೆ ಸಮಾಜದಲ್ಲಿ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು “ಒಬ್ಬ ಕೆಟ್ಟ ಪತ್ರಕರ್ತ ನೂರು ಜನ ಭಯೋತ್ಪಾದಕರಿಗೆ ಸಮ” ಎಂದು ಹೇಳಿರುವುದನ್ನು ಸ್ಮರಿಸಿದ ದೀಪಕ್, ಇಂದು ಸಮಾಜ ಒಳ್ಳೆಯ ಪತ್ರಕರ್ತನ ಪರವಾಗಿರಬೇಕೋ ಅಥವಾ ಕೆಟ್ಟ ಪತ್ರಕರ್ತನ ಪರವಾಗಿರಬೇಕೋ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ ಎಂದು ಹೇಳಿದರು.
ಗುಂಪುಗಾರಿಕೆ, ಜಾತೀಯತೆ, ಭ್ರಷ್ಟಾಚಾರ, ಅಹಂಕಾರ ಇವೆಲ್ಲ ಮಾನವ ಸಹಜ ಗುಣಗಳಾಗಿದ್ದರೂ, ಅವುಗಳ ಪ್ರಮಾಣ ಮತ್ತು ನಿಯಂತ್ರಣವೇ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ದೇಶದಲ್ಲಿ ಎಲ್ಲವೂ ಸಿಗಬಹುದು, ಆದರೆ ಪ್ರಮಾಣಿಕತೆ ಮಾತ್ರ ಹೊರಗಿಂದ ಸಿಗುವುದಿಲ್ಲ; ಅದು ಪ್ರತಿಯೊಬ್ಬರೊಳಗೇ ಬೆಳೆಯಬೇಕು ಎಂದು ತಿಳಿಸಿದರು.

ಒಬ್ಬ ರಾಜಕಾರಣಿಯೊಳಗೆ ಪತ್ರಕರ್ತ ಇದ್ದರೆ ಸಮಾಜಕ್ಕೆ ಭಯವಿಲ್ಲ. ಆದರೆ ಒಬ್ಬ ಪತ್ರಕರ್ತನೊಳಗೆ ರಾಜಕಾರಣಿ ಪ್ರವೇಶಿಸಿದರೆ ಅದು ಸಮಾಜಕ್ಕೆ ಅಪಾಯಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಲ್ಲಿ ರಾಜಕೀಯ ಸ್ವಭಾವ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಎಚ್ಚರಿಸಿದರು.

ನೂತನ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದ ಮೈಸೂರು ಕಬಿನಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಮಾಜಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸೀಹಳ್ಳಿ ಗುರುಮೂರ್ತಿ, ನಮ್ಮ ದೇಶದಲ್ಲಿ ಪ್ರಾಮಾಣಿಕತೆಯ ಕೊರತೆ ಹೆಚ್ಚಾಗಿದ್ದು, ಬಾಯಲ್ಲಿ ಹೇಳುವುದು ಒಂದು, ನಡೆವಿಕೆ ಮತ್ತೊಂದು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

“ನ್ಯಾಯವಾದಿ ಲೋಕವಿರೋಧಿ” ಎಂಬ ಪೂರ್ವಿಕರ ಮಾತು ಇಂದಿನ ಸಮಾಜದಲ್ಲಿ ಸತ್ಯವಾಗಿ ಪರಿಣಮಿಸಿದೆ. ನ್ಯಾಯವಾಗಿ ನಡೆಯುವವರಿಗೆ ಕಾಲವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅನಿಷ್ಠ ಸ್ಥಿತಿಯನ್ನು ನಿಗ್ರಹಿಸಬೇಕಾದರೆ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದಾಗಿದೆ. ಸಮಾಜದಲ್ಲಿನ ಕೆಟ್ಟದನ್ನು ಬಯಲಿಗೆಳೆದು, ಸರಿದಾರಿಯನ್ನು ತೋರಿಸುವ ಕಾರ್ಯವನ್ನು ಪತ್ರಿಕಾ ಮಾಧ್ಯಮದಿಂದಲೇ ಪರಿಣಾಮಕಾರಿಯಾಗಿ ಮಾಡಬಹುದು ಎಂದು ಹೇಳಿದರು.
ಪ್ರಾಮಾಣಿಕತೆಯಿಂದ ನಡೆದು, ನ್ಯಾಯಯುತವಾಗಿ ಸಂಪಾದಿಸುವುದೇ ನಿಜವಾದ ಆತ್ಮತೃಪ್ತಿ. ಅನ್ಯಾಯದ ಮಾರ್ಗ ಯಾವತ್ತೂ ಶ್ರೇಯಸ್ಕರವಲ್ಲ. ಪತ್ರಕರ್ತರು ಸತ್ಯ ಮತ್ತು ಪ್ರಮಾಣಿಕತೆಯ ದಾರಿಯಿಂದ ಹಿಂದೆ ಸರಿಯಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರಕ್ಷಕ ನಿರೀಕ್ಷಕ ಧನಂಜಯ ಮಾತನಾಡಿ, ಧ್ವನಿ ಇಲ್ಲದವರ ಆಶಯದಿಂದಲೇ ಸಾಕಷ್ಟು ಜನರು ಪತ್ರಕರ್ತರ ಸಂಘದ ಕಚೇರಿ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ತಾಲ್ಲೂಕಿನ ಸಮಗ್ರ ಸಮಸ್ಯೆಗಳ ಧ್ವನಿಯಾಗಿ ಪತ್ರಕರ್ತರ ಸಂಘವು ಸತ್ಯ ಮತ್ತು ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಆಶಿಸಿದರು.

ಇದೇ ವೇಳೆ ಪುರಸಭಾ ಸದಸ್ಯ ಹಾಗೂ ಚಲನಚಿತ್ರ ನಟ ಆರ್. ಅರ್ಜುನ್ ಮಾತನಾಡಿ, ನಮ್ಮವರೇ ಆಗಿರಲಿ, ಯಾರೇ ತಪ್ಪು ಮಾಡಿದರೂ ಅದನ್ನು ತಪ್ಪು ಎಂದು ಹೇಳುವ ಧೈರ್ಯ ನಮಗಿರಬೇಕು. ಅದೇ ರೀತಿ ಒಳ್ಳೆಯ ಕೆಲಸ ಶತ್ರುಗಳಿಂದಲೇ ಬಂದರೂ ಅದನ್ನು ಮೆಚ್ಚುವ ಮನಸ್ಥಿತಿ ಬೆಳೆಸಿಕೊಂಡಾಗ ಮಾತ್ರ ಒಬ್ಬ ಯೋಗ್ಯ ನಾಗರಿಕನಾಗಿ ಬದುಕಲು ಸಾಧ್ಯ ಎಂದು ಹೇಳಿದರು.

ಸರಿ–ತಪ್ಪುಗಳನ್ನು ಬರವಣಿಗೆಯ ಮೂಲಕ ಸಮಾಜಕ್ಕೆ ತಿಳಿಸುವ ಜವಾಬ್ದಾರಿ ಇರುವ ಏಕೈಕ ಕ್ಷೇತ್ರ ಪತ್ರಿಕೋದ್ಯಮ. ನರಸೀಪುರದ ಪತ್ರಕರ್ತರ ಸಂಘ ಸಮಾಜದ ಅಂಕು–ಡೊಂಕುಗಳನ್ನು ತಿದ್ದುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಿ. ತಾಲ್ಲೂಕಿನಲ್ಲಿ ಪತ್ರಕರ್ತರ ಸಂಘದ ಕಚೇರಿ ತೆರೆಯಲ್ಪಟ್ಟಿರುವುದು ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು.

ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಸಿ. ಬಿ. ಹುಂಡಿ ಚಿನ್ನಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಸತ್ಯ ರಾಜ್, ಪುರಸಭಾ ಮಾಜಿ ಸದಸ್ಯರಾದ ಅರ್ಜುನ್ ರಮೇಶ್, ಸೋಮಣ್ಣ ಸಮಾಜ ಸೇವಕ ಮಹದೇಶ್, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಕನ್ನಡ ಪುಟ್ಟಸ್ವಾಮಿ, ಚೇಸ್ಕಾಂ ಎಇಇ ವೀರೇಶ್, ಪುರಸಭಾ ಮುಖ್ಯ ಅಧಿಕಾರಿ ಸಿ. ಶ್ರೀನಿವಾಸ್, ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಕ್ರಂಪಾಷ, ಉಪಾಧ್ಯಕ್ಷ ನಂಜುಂಡಯ್ಯ, ಪ್ರಧಾನ ಕಾರ್ಯದರ್ಶಿ ಆಲಗೂಡು ರೇವಣ್ಣ, ಕುರುಬೂರು ಪಿ. ಎ. ಸಿ.ಬಿ.ಉಪಾಧ್ಯಕ್ಷ ಕನ್ನಹಳ್ಳಿ ಶಿವಕುಮಾರ್, ಕೋತ್ತೆಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ, ಕರೋಹಟ್ಟಿ ಪ್ರಭುಸ್ವಾಮಿ, ರೈತ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಕಬ್ಬು ಬೆಳೆಗಾರ ಸಂಘದ ಕಿರಗಸೂರ್ ಶಂಕರ್, ಕೃಷಿ ಸಮಾಜದ ಅಧ್ಯಕ್ಷ ಶಿವಮಲ್ಲಪ್ಪ, ಪೂಜಿತ್ ಕುಮಾರ್, ಡಾ. ಮಲ್ಲಿಕಾರ್ಜುನ ಸ್ವಾಮಿ,ಸಿದ್ದಪ್ಪಾಜಿ, ಮಹದೇವಮ್ಮ,ಉಮಾಪತಿ, ಅಕ್ಕಿನಾಗಪ್ಪ, ನಂಜುಂಡಸ್ವಾಮಿ,ಸಿ.ಡಿ. ವೆಂಕಟೇಶ್, ಶ್ರೀ ಶಿವಕುಮಾರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ, ಸೋಸಲೆ ರಾಜಶೇಖರ, ಬಡ್ದು ಶಿವಕುಮಾರ್, ಬೂದಳ್ಳಿ ಸಿದ್ದರಾಜು, ಆಲಗೂಡು ನಾಗರಾಜು, ಹಲವಾರ ಮಹದೇವಸ್ವಾಮಿ ಹಾಗೂ ಸಂಘದ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.

“ಧ್ವನಿ ಇಲ್ಲದವರ ಪರವಾಗಿ ನಿಲ್ಲುವುದೇ ಪತ್ರಕರ್ತರ ನಿಜವಾದ ಕರ್ತವ್ಯ.”
“ಸಮಾಜದ ನೋವಿಗೆ ಸ್ಪಂದಿಸುವ ಶಕ್ತಿಯೇ ಪತ್ರಿಕೋದ್ಯಮದ ಅಸ್ತ್ರ.”
“ಪತ್ರಕರ್ತರ ಸಂಘವು ತಾಲ್ಲೂಕಿನ ಸಮಗ್ರ ಸಮಸ್ಯೆಗಳ ಪ್ರತಿಧ್ವನಿಯಾಗಬೇಕು.”
l ಆರಕ್ಷಕ ನಿರೀಕ್ಷಕ ಧನಂಜಯ

“ಪ್ರಮಾಣಿಕತೆ ಪತ್ರಕರ್ತನ ಆಯುಧ; ರಾಜಕೀಯ ಅಜೆಂಡಾ ಪತ್ರಿಕೋದ್ಯಮದ ಶತ್ರು.”
“ಸಂಘದ ಬಾಗಿಲು ತೆರೆದಿದ್ದರೂ ಜನರ ಹೆಜ್ಜೆ ಇಲ್ಲದಿದ್ದರೆ ಸಂಘ ಶಕ್ತಿಹೀನವಾಗುತ್ತದೆ.”
“ಒಳ್ಳೆಯ ಪತ್ರಕರ್ತರನ್ನು ರಕ್ಷಿಸುವ ಜವಾಬ್ದಾರಿ ಸಮಾಜದ ಮೇಲಿದೆ.”
l ಕೆ. ದೀಪಕ್

Megha
the authorMegha

Leave a Reply

error: Content is protected !!