ಚಾಮರಾಜನಗರ: ಬೇಸಿಗೆಯ ದಿನವಾಗಿರುವುದರಿಂದ ಕಾಡಿನಲ್ಲಿ ನೀರು ಮತ್ತು ಮೇವು ಸಿಗದ ಕಾರಣ ಕಾಡಾನೆಗಳು ನೇರವಾಗಿ ನಾಡಿಗೆ ಬಂದು ರೈತರ ಜಮೀನಿಗೆ ನುಗ್ಗುತ್ತಿವೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣ ಜಿಲ್ಲೆಯ ಗಡಿಯಂಚಿನ ತಾಳವಾಡಿ ಬಳಿಯ ಗ್ರಾಮಸ್ಥರು ಆಕ್ರೋಶಗೊಂಡು ಜಮೀನಿಗೆ ನುಗ್ಗಿದ ಕಾಡಾನೆಯನ್ನು ಟ್ರ್ಯಾಕ್ಟರ್ ಮೂಲಕ ಕಾಡಿಗೆ ಓಡಿಸಿದ್ದಾರೆ.
ಈಗಾಗಲೇ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಕಷ್ಟಪಟ್ಟು ಬೆಳೆದ ಬೆಳೆ ಫಸಲಿಗೆ ಬರುತ್ತಿದ್ದಂತೆಯೇ ಕಾಡಾನೆಗಳು ಸೇರಿದಂತೆ ವಿವಿಧ ವನ್ಯ ಪ್ರಾಣಿಗಳು ಜಮೀನಿಗೆ ನುಗ್ಗಿ ಫಸಲನ್ನು ತಿಂದು ಹಾಳು ಮಾಡುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ನಡುವೆ ಕೃಷಿ ಜಮೀನಿಗೆ ನುಗ್ಗಿ ಫಸಲು ನಾಶ ಮಾಡಲು ಬರುತ್ತಿದ್ದು, ಅದರಂತೆ ಕಾಡಾನೆಯೊಂದು ಜಮೀನಿಗೆ ಬಂದಿದ್ದನ್ನು ಗಮನಿಸಿದ ರೈತರು ತಮ್ಮ ಟ್ರ್ಯಾಕ್ಟರ್ನಲ್ಲಿ ಭಾರಿ ಶಬ್ದದ ಜತೆಗೆ ಚಾಲನೆ ಮಾಡಿಕೊಂಡು ಹೋಗುವ ಮೂಲಕ ಹಿಮ್ಮೆಟ್ಟಿಸಿದ್ದಾರೆ.
ಇದು ಅಪಾಯಕಾರಿಯಾಗಿದ್ದರೂ ಅನ್ಯ ಮಾರ್ಗವಿಲ್ಲದೆ ಪ್ರಾಣದ ಹಂಗು ತೊರೆದು ರೈತರು ಈ ಕೆಲಸವನ್ನು ಮಾಡಿದ್ದಾರೆ.ಇನ್ನಾದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಇತ್ತ ಗಮನಹರಿಸಿ ಕಾಡಾನೆಗಳು ಕೃಷಿ ಜಮೀನಿಗೆ ನುಗ್ಗಿ ಫಸಲು ನಾಶ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.