ಕಿರುತೆರೆ ಹಾಸ್ಯ ನಟ ತುಕಾಲಿ ಸಂತು ಕಾರು – ಆಟೋ ನಡುವೆ ಅಪಘಾತ: ಆಟೋ ಚಾಲಕ ಸಾವು
ತುಮಕೂರು: ಕಿರುತೆರಯ ಹಾಸ್ಯ ನಟ ಕನ್ನಡ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ದಂಪತಿಯ ಕಾರು ಮತ್ತು ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಮೃತಪಟ್ಟಿದ್ದಾರೆ.
ಕುಣಿಗಲ್ ತಾಲೂಕು ಕೋಡಿಹಳ್ಳಿಪಾಳ್ಯ ನಿವಾಸಿ ಜಗದೀಶ್ (44) ಮೃತ ಆಟೋ ಚಾಲಕ. ಅಪಘಾತದಲ್ಲಿ ಗಾಯಗೊಂಡಿದ್ದ ಜಗದೀಶ್ ಅವರನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.14ರ ಗುರುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಘಟನೆ ವಿವರ: ಬುಧವಾರ ರಾತ್ರಿ ಶೂಟಿಂಗ್ ಮುಗಿಸಿಕೊಂಡು ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ತಮ್ಮ ಸ್ವಗ್ರಾಮವಾದ ಹೊಳೆನರಸೀಪುರ ಕಡೆಗೆ ತುಕಾಲಿ ಸಂತೋಷ್ ಮತ್ತು ಅವರು ಪತ್ನಿ ಮಾನಸಾ ಜೊತೆ ಪ್ರಯಾಣಿಸುತ್ತಿದ್ದರು.
ಅದೇ ವೇಳೆ ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ಈ ಸಂದರ್ಭದಲ್ಲಿ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ತುಕಾಲಿ ಸಂತೋಷ್ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಗಾಯಗೊಂಡಿದ್ದ ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಘಟನೆ ಸಂಬಂಧ ದೂರು ಪ್ರತಿದೂರು ದಾಖಲಿಸಲು ಎರಡೂ ಕಡೆಯವರು ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಟೋ ಡ್ರೈವರ್ ಕಾರ್‌ಗೆ ಡಿಕ್ಕಿ ಹೊಡೆದಿದ್ದಾರೆ ಅಂತಾ ತುಕಾಲಿ ಸಂತು ಆರೋಪಿಸುತ್ತಿದ್ದರು. ಈ ಬಗ್ಗೆ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.