CrimeNEWSಬೆಂಗಳೂರು

ಭೀಕರ ರಸ್ತೆ ಅಪಘಾತ: ಹೊತ್ತಿ ಉರಿದ ಕಾರು – ತಾಯಿ, ಎರಡು ವರ್ಷದ ಮಗು ಸಜೀವ ದಹನ, ತಂದೆ ಮತ್ತೊಂದು ಮಗು ಸ್ಥಿತಿ ಗಂಭೀರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನೈಸ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮಗು ಇಬ್ಬರು ಸಜೀವ ದಹನಗೊಂಡಿರುವ ಘಟನೆ ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸೋಂಪುರ ಬಳಿ ಜರುಗಿದೆ.

ಅಪಘಾತದ ರಭಸಕ್ಕೆ ಕಾರು ತಡೆಗೋಡೆ ದಾಟಿ ಪಕ್ಕದ ರಸ್ತೆಗೆ ಬಂದಿದ್ದು, ಅಪಘಾತದ ತೀವ್ರತೆಗೆ ಕಾರು ಪಲ್ಟಿಯಾಗಿ ಬೆಂಕಿ ಹೊತ್ತುಕೊಂಡಿದೆ. ದುರ್ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರ ಪೈಕಿ ಸಿಂಧು (28) ಹಾಗೂ ಎರಡು ವರ್ಷದ ಮಗು ಸಾವನ್ನಪ್ಪಿದ್ದು, ಕಾರು ಚಾಲಕ ಮಹೇಂದ್ರನ್ ಹಾಗೂ ಮತ್ತೊಂದು ಮಗುವಿಗೆ ತೀವ್ರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಪಲ್ಟಿಯಾಗಿ ಬೆಂಕಿ ಹೊತ್ತುಕೊಂಡಿದ್ದದಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ಕಾರು ಗುದ್ದಿದ್ದರಿಂದ ಲಾರಿ ಸಹ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ.

ಘಟನೆ ವಿವರ: ಮೂಲತಃ ಸೇಲಂ ನವರಾಗಿರುವ ಮಹೇಂದ್ರನ್ ಎಂಬುವರು ಹಾಲಿ ರಾಮಮೂರ್ತಿನಗರ ಬಳಿಯ ವಿಜಿನಾಪುರದಲ್ಲಿ ವಾಸವಿದ್ದಾರೆ. ಅವರು ಕುಟುಂಬ ಸಮೇತ ಇಂದು ಮುಂಜಾನೆ ನೈಸ್‌ ರಸ್ತೆಯಲ್ಲಿ ಬರುತ್ತಿದ್ದ ಕಾರು ಮೊದಲು ಲಾರಿಗೆ ಡಿಕ್ಕಿ ಹೊಡೆದಿದೆ ನಂತರ ರಸ್ತೆ ವಿಭಜಕಕ್ಕೆ ಗುದ್ದಿಕೊಂಡು ಹೋಗಿ ಪಲ್ಟಿಹೊಡೆದು ಬೆಂಕಿಹೊತ್ತಿಕೊಂಡಿದ್ದರಿಂದ ಈ ಅನಾಹುತ ಜರುಗಿದೆ.

ಅನ್​ಲೈನ್ ಮೂಲಕ ಕಾರನ್ನು ಮಹೇಂದ್ರನ್ ಬಾಡಿಗೆಗೆ ಪಡೆದಿದ್ದರು. ರಾಮಮೂರ್ತಿನಗರದಿಂದ ಕನಕಪುರ ನೈಸ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಬೆಂಗಳೂರಿನ ಸೋಂಪುರ ಬಳಿ ಕಾರು ಬರುತ್ತಿದಂತೆ ಈ ಘಟನೆ ನಡೆದಿದೆ.

ಈ ಸಂಬಂಧ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರಗಿಸುತ್ತಿದ್ದಾರೆ.

Leave a Reply