ಇಂದು ಕರೆದಿದ್ದ KSRTC ನೌಕರರ ಸಂಧಾನ ಸಭೆಯಲ್ಲಿ ಕಾಲವಕಾಶ ಕೇಳಿದ ಆಡಳಿತ ಮಂಡಳಿ- ಆ.2ಕ್ಕೆ ಸಭೆ ಮುಂದೂಡಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗಸ್ಟ್ 5ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೋಟಿಸ್ ನೀಡಿರುವ ಸಂಬಂಧ ಇಂದು ಸಂಜೆ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯು ಪ್ರಮುಖ ಬೇಡಿಕೆಗಳಾದ 38 ತಿಂಗಳ ವೇತನ ಹಿಂಬಾಕಿ ಮತ್ತು 2024ರ ಜನವರಿ 1ರಿಂದ ಜಾರಿಗೆ ಬರಬೇಕಾಗಿರುವ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ಆಗಸ್ಟ್ 5 ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದು, ಹೀಗಾಗಿ ಸರ್ಕಾರ ಅಷ್ಟರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದೆ.
ಈ ಹಿನ್ನೆಲೆಯಲ್ಲಿ ಸಮತಿ ನೀಡಿರುವ ಮುಷ್ಕರದ ನೋಟಿಸ್ ಸಂಬಂಧ ಇಂದು ಕಾರ್ಮಿಕ ಇಲಾಖೆ ಆಯುಕ್ತರ ಸಮ್ಮುಖದಲ್ಲಿ ಸಮಿತಿ ಪದಾಧಿಕಾರಿಗಳು ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ನಡುವೆ ಸಂಧಾನ ಸಭೆ ನಡೆಯಿತು.
ಈ ವೇಳೆ ಜಂಟಿ ಕ್ರಿಯಾ ಸಮಿತಿ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024 ಜನವರಿ 1ರಿಂದ ವೇತನ ಪರಿಷ್ಕರಣೆ, ಎರಡು ಬೇಡಿಕೆಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿ ಈ ನಮ್ಮ ಬೇಡಿಕೆಗಳನ್ನು ಈಡೇರಿಸಲೇಬೇಕೆಂದು ಒತ್ತಾಯಿಸಿತು. ಸಮಿತಿಯ ವಾದವನ್ನು ಆಲಿಸಿದ ಆಯುಕ್ತರು ಆಡಳಿತ ವರ್ಗದ ಅಭಿಪ್ರಾಯ ಕೇಳಿದರು.
ಈ ಸಂದರ್ಭದಲ್ಲಿ ಆಡಳಿತ ವರ್ಗದ ಪರವಾಗಿ ಸಭೆಗೆ ಆಗಮಿಸಸಿದ್ದ ಕೆಎಸ್‌ಆರ್‌ಟಿಸಿ ನಿಗಮದ ನಿರ್ದೇಶಕರು ( ಸಿ ಮತ್ತು ಜಾ), ಕಾರ್ಮಿಕರ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗಿದೆ. ಅಲ್ಲದೆ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಸ್ವಲ್ಪ ಕಾಲಾವಕಾಶ ಬೇಕೆಂದು ಮನವಿ ಮಾಡಿದರು.
ಆಗ ಜಂಟಿ ಕ್ರಿಯಾ ಸಮಿತಿಯು ನಮ್ಮ ಬೇಡಿಕೆಗಳ ಬಗ್ಗೆ ಅಂತಿಮ ತೀರ್ಮಾನವನ್ನು ಆಗಸ್ಟ್ 4ರೊಳೆಗೆ ತೆಗೆದುಕೊಳ್ಳಲೇಬೇಕು ಎಂದು ಸ್ಪಷ್ಟವಾಗಿ ತಿಳಿಸಿತು. ಹೀಗಾಗಿ ಆಯುಕ್ತರು ಸಭೆಯನ್ನು ಮತ್ತೆ ಆ.2ರಂದು ಬೆಳಗ್ಗೆ 11 ಗಂಟೆಗೆ ನಿಗದಿಸಿಗೊಳಿಸಿ ಅಂದು ಆಡಳಿತ ವರ್ಗ ಸರ್ಕಾರದ ಸ್ಪಷ್ಟ ತೀರ್ಮಾನವನ್ನು ತಿಳಿಸಬೇಕು ಎಂದು ಸೂಚಿಸಿದರು.

ಇನ್ನು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸರ್ಕಾರದಿಂದ ನಮ್ಮ ಬೇಡಿಕೆಗಳ ಬಗ್ಗೆ ಸ್ಪಷ್ಟ ತೀರ್ಮಾನ ಬರುವವರಿಗೂ ಮುಷ್ಕರದ ತೀರ್ಮಾನ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
Related








