ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಜನತಂತ್ರ ವ್ಯವಸ್ಥೆ ವಿನಾಶವಾಗುತ್ತಿದೆ ಎಂದು ನಿವೃತ್ತ ನ್ಯಾಯಾಧೀಶ ಗೋಪಾಲಗೌಡ ವಿಷಾದ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಶಾಸಕರ ಭವನದಲ್ಲಿ ಕರ್ನಾಟಕ ನೆಲ ಜಲ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ ಇಂದಿನ ಮಾಧ್ಯಮ ಮತ್ತು ಜನತಂತ್ರ ವ್ಯವಸ್ಥೆ ವಿಚಾರ – ವಿಮರ್ಶಾ ಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಆಗುಹೋಗುಗಳ ಬಗ್ಗೆ ವಿರ್ಮಶಿಸಿದಾಗ ಸರ್ಕಾರದ ಮೂರು ಅಂಗಗಳು ಸಂಪೂರ್ಣ ವಿಫಲವಾಗಿದೆ. ಇದನ್ನು ಟೀಕೆ-ಟಿಪ್ಪಣಿ ಮಾಡುವ ನಾಲ್ಕನೇ ಅಂಗ ಪತ್ರಿಕಾ ರಂಗವು ಕೂಡಾ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ಮಾಧ್ಯಮ ರಂಗದಲ್ಲಿ ಅಪ್ರಸ್ತುತ ವಿಚಾರಗಳನ್ನು ವೈಭವೀಕರಿಸುತ್ತಿದೆ. ಅಸಂಬದ್ಧ ಚರ್ಚೆಗಳ ಬಗ್ಗೆ ಪತ್ರಿಕೆಯಲ್ಲಿ ತುಂಬಿದೆ. ಲೋಕಸಭೆಯಲ್ಲಿ 130ಕ್ಕೂ ಹೆಚ್ಚು ಸಂಸದರನ್ನು ಸದನದಿಂದ ಹೊರಗಿಟ್ಟು ಕೆಲ ಮಸೂದೆಯನ್ನು ವಿಚಾರವಿಲ್ಲದೇ ಅಂಗೀಕರಿಸಿರುವುದು ಎಂತಹ ದೌರ್ಜನ್ಯ ಎಂದು ಸರ್ಕಾರದ ನಡೆಯನ್ನು ಟೀಕಿಸಿದರು.
ನಾನು ಬೀದಿಯಲ್ಲಿ ರೈತರ ಪರವಾಗಿ ಮತ್ತು ಮಹಿಳೆಯರ ಬಗ್ಗೆ ಹೋರಾಟ ನಡೆಸಿ ನ್ಯಾಯಾಧೀಶನಾಗಿ ನಿವೃತ್ತಿ ಹೊಂದಿದ್ದೇನೆ ಎಂದು ತಮ್ಮ ಹೋರಾಟದ ನೆನಪು ಬಿಚ್ಚಿಟ್ಟರು. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಮತ್ತು ರೈತರ ಪರವಾಗಿ ಹೋರಾಟಗಾರ ಸಂಖ್ಯೆ ಹೆಚ್ಚಳವಾಗಬೇಕು ಎಂದು ಗೋಪಾಲಗೌಡ ತಿಳಿಸಿದರು.
ಸರ್ಕಾರದ ನಾಲ್ಕು ಅಂಗಗಳ ವಿರುದ್ಧ ಹೋರಾಟ ಮಾಡುತ್ತಿರುವುದು ಸ್ವಾತಂತ್ರ್ಯ ಭಾರತದ ಎರಡನೇ ಹೋರಾಟ ಎಂದರೆ ತಪ್ಪಾಗಲಾರದು. ಕುರುಬೂರು ಶಾಂತಕುಮಾರ್ ಅವರು ಈ ರೀತಿಯ ವಿಚಾರಗೋಷ್ಠಿಗಳನ್ನು ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಆಯೋಜಿಸಲೆಂದು ಗೋಪಾಲಗೌಡ ಹಾರೈಸಿದರು.
ನಂತರ ಮುಖ್ಯಮಂತ್ರಿ ಚಂದ್ರು ಮಾತನಾಡಿ, ದೇಶದಲ್ಲಿ ರಾಮಮಂದಿರಕ್ಕಿಂತ ರಾಮರಾಜ್ಯ ಮುಖ್ಯವಾಗಿದೆ. ಸರ್ಕಾರದ ನಾಲ್ಕು ಅಂಗಗಳು ಇಂದು ಕಲ್ಮಶವಾಗಿದೆ. ಶಕ್ತಿರಂಗವು ಐದನೇ ರಂಗವಾಗಿ ನಾವುಗಳು ಹುಟ್ಟು ಹಾಕಬೇಕೆಂದರು.
ದೇಶದಲ್ಲಿ ಇಂದು ಜಾತಿ ಮತ್ತು ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ. ಹಿಂದೆ ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕಾಲ ಬದಲಾವಣೆ ಆದಂತೆ ಇದು ಕೂಡಾ ಬದಲಾವಣೆ ಆಗುತ್ತಿದೆ. ಕಳೆದ ಒಂದು ವಾರದಿಂದ ಪತ್ರಿಕೆಯಲ್ಲಿ ಒಂದು ಸುದ್ದಿಯು ಇಲ್ಲ. ಎಲ್ಲ ಬರೀ ರಾಮಮಂದಿರ ಉದ್ಘಾಟನೆಯ ಸುದ್ದಿಯನ್ನು ಪ್ರಚಾರಮಾಡುತ್ತಿದೆ ಎಂದರು.
ನ್ಯಾಯಾಂಗದ ವಿರುದ್ಧ ನಾವು ಮಾತನಾಡಿದರೆ ನಮ್ಮನ್ನು ಕೂಡಲೇ ಬಂಧಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಜನ ಜಾಗೃತಿಯನ್ನು ನಾವೆಲ್ಲರೂ ಒಟ್ಟಾಗಿ ರಾಜ್ಯಾದ್ಯಂತ ಮಾಡೋಣ ಎಂದು ಕರೆ ನೀಡಿದರು. ಪಕ್ಷ ಭೇಧ ಮರೆತು ಎಲ್ಲರೂ ಒಂದಾಗಿ ಕುರುಬೂರು ಶಾಂತಕುಮಾರ್ ಅವರ ಜತೆಗೆ ಕೈ ಜೋಡಿಸೋಣ ಎಂದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ, ರೈತರತ್ನ ಕುರುಬೂರು ಶಾಂತಕುಮಾರ್ ಮಾತನಾಡಿ, ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೇವಲ ಮಾಧ್ಯಮ ಕ್ಷೇತ್ರ ಮಾತ್ರ ಹಾಳಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ವಿಜಯಲಕ್ಷ್ಮಿ ಶಿಬಲೂರು ಅವರು ದೇಶದಲ್ಲಿ ಪ್ರಸ್ತುತ ಸನ್ನಿವೇಶದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿ ಮಾತನಾಡಿದ್ದಾರೆ. ಜತೆಗೆ ಮಹಿಮ ಪಟೇಲ್ ಅವರು ಸಹ ಚೆನ್ನಾಗಿ ಮಾತನಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ವಿಚಾರಗಳನ್ನು ಜನರಿಗೆ ತಿಳಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ರಾಜ್ಯದ ಎಲ್ಲ ಕಡೆ ಆಯೋಜಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಿದರೆ ಜನರು ಇಂದಲ್ಲ ನಾಳೆ ಬದಲಾವಣೆ ಆಗುತ್ತಾರೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ಇಂದು ಮಾಧ್ಯಮ ಕ್ಷೇತ್ರದಲ್ಲಿ ಬಂಡವಾಳಶಾಹಿಗಳ ಹಿಡಿತ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬಂಡವಾಳಶಾಹಿಗಳ ಸಾಲ ಮನ್ನ ಮಾಡಿದರೆ ಯಾರು ಚಕಾರ ಎತ್ತುವುದಿಲ್ಲ. ಅದೇ ರೈತರ ಸಾಲ ಮನ್ನಾ ಮಾಡಿ ಎಂದರೆ ಯಾರು ಗಮನಹರಿಸುವುದಿಲ್ಲ ಎಂದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ನಾಡಗೀತೆ ಮತ್ತು ರೈತ ಗೀತೆಯನ್ನು ಹಾಡಿದಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ರಾಜ್ಯದ ನಾನಾ ಭಾಗಗಳಿಂದ ನೂರಾರು ಸಂಖ್ಯೆಯ ಜನರು ಈ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನ ಆರಾಧ್ಯ ಪ್ರಸ್ತಾವಿಕವಾಗಿ ಮಾತನಾಡಿದರು ಯೋಗಾನಂದ ಎಲ್ಲರನ್ನೂ ಸ್ವಾಗತಿಸಿದರು. ಕನ್ನಡ ಚಳುವಳಿ ಗುರುದೇವ ನಾರಾಯಣ ಕಾರ್ಯಕ್ರಮ ನಿರೂಪಣೆ ಮಾಡಿದರು ವಂದನಾರ್ಪಣೆಯನ್ನು ಮಾಜಿ ಸೈನಿಕರ ಅಧ್ಯಕ್ಷ ಡಾ. ಶಿವಣ್ಣ ಮಾಡಿದರು.