NEWSನಮ್ಮಜಿಲ್ಲೆನಮ್ಮರಾಜ್ಯ

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ವೃಕ್ಷಮಾತೆ ತಿಮ್ಮಕ್ಕನ ಅಂತ್ಯಕ್ರಿಯೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶುಕ್ರವಾರ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆ ಬೆಂಗಳೂರಿನ ಜ್ಞಾನಭಾರತಿ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ದತ್ತುಪುತ್ರ ಉಮೇಶ್ ಅವರು ಹಿಂದೂ ಸಂಪ್ರದಾಯದಂತೆ ವಿಧಿವಿಧಾನ ನೆರವೇರಿಸಿ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ಪೊಲೀಸರು ತಿಮ್ಮಕ್ಕ ಅವರಿಗೆ ವಿಶೇಷ ಗೌರವ ಸಲ್ಲಿಸಿದರು.

114 ವರ್ಷ ಪರಿಸರದ ಜತೆಗೆ ತುಂಬು ಜೀವನ ನಡೆಸಿದ ತಿಮ್ಮಕ್ಕ ಅವರು ಕಳೆದ ಒಂದು ತಿಂಗಳಿಂದ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು. ನಿನ್ನೆ ಅಂದರೆ ನ.14 ರಂದು ಇಹಲೋಕ ತ್ಯೆಜಿಸಿದ್ದರು.

ಮಕ್ಕಳಿಲ್ಲದ ನೋವನ್ನು ಮರೆಯುವ ಸಲುವಾಗಿ ಗಿಡಗಳನ್ನು ನೆಡುವ ಕಾಯಕ ಆರಂಭಿಸಿದ ತಿಮ್ಮಕ್ಕ, ಸಾವಿರಾರು ಗಿಡಗಳನ್ನು ನೆಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಮಾದರಿಯಾದರು. ಜೀವನದುದ್ದಕ್ಕೂ ಗಿಡಗಳನ್ನು ನೆಡುತ್ತಲೇ ಮಕ್ಕಳಂತೆ ಪ್ರೀತಿಸಿದ್ದರು.

ಶುಕ್ರವಾರ ತಿಮ್ಮಕ್ಕ ಅವರ ಹುಟ್ಟೂರು ಹಾಸನ ಜಿಲ್ಲೆಯಲ್ಲೂ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಇಂದು (ನ.15) ಬೆಳಗ್ಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಇನ್ನೂ ಪರಿಸರ ಸಂರಕ್ಷಣೆಗಾಗಿ ದುಡಿದ ಕೈಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಎರಡು ಮಹತ್ವದ ಘೋಷಣೆಯನ್ನ ಅರಣ್ಯ ಇಲಾಖೆ ಮಾಡಿದೆ. ತಿಮ್ಮಕ್ಕ ಸ್ಮರಣಾರ್ಥ, ಅವರು ಬದುಕಿದ 114 ವರ್ಷಗಳ ಸಾರ್ಥಕ ಜೀವನದ ಸಾಧನೆ ಸಾರುವ ನಿಟ್ಟಿನಲ್ಲಿ ರಾಜ್ಯದ 114 ಕಡೆ ವಿವಿಧ ಪ್ರಭೇದದ ಗಿಡಗಳನ್ನ ನೆಟ್ಟು ಸಂರಕ್ಷಿಸುವುದು.

ಜತೆಗೆ ಮುಂದಿನ ವರ್ಷದಿಂದ ಪರಿಸರ ಸಂರಕ್ಷಣೆ ಮಾಡುವವರಿಗೆ, ತಿಮ್ಮಕ್ಕ ಹೆಸರಿನಲ್ಲಿ ಪರಿಸರ ಸಂರಕ್ಷಣಾ ಪ್ರಶಸ್ತಿ ನೀಡುವುದಾಗಿ ಅರಣ್ಯ ಇಲಾಖೆ ಘೋಷಣೆ ಮಾಡಿದೆ. ಈ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿ ಬಾಳಿದ ಜೀವಕ್ಕೆ, ಗೌರವ ಸಲ್ಲಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ತಿಮ್ಮಕ್ಕ ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಈಶ್ವರ್ ಖಂಡ್ರೆ, ವಿಪಕ್ಷ ನಾಯಕ ಆರ್.ಅಶೋಕ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.

Megha
the authorMegha

Leave a Reply

error: Content is protected !!