ಬೆಂಗಳೂರು: ಸಾರಿಗೆ ನೌಕರರ ಬಹುದಿನಗಳ ಬೇಡಿಕೆಗಳ ಈಡೆರಿಕೆಗಾಗಿ ಮತ್ತೆ ಸಿಎಂ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಬರಿ ಭರವಸೆಯಲ್ಲೇ ಕಾಲದೂಡುತ್ತಿದ್ದಾರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.
ಹಗಲಿರುಳೆನ್ನದೆ ಹಬ್ಬ ಹರಿದಿನಗಳಲ್ಲೂ ಸಹ ಕುಟುಂಬದಿಂದ ದೂರ ಉಳಿದು ಸಾರ್ವಜನಿಕರಿಗೆ ಸುರಕ್ಷಿತ, ಉತ್ತಮ ಸೇವೆ ನೀಡುವ ಸಾರಿಗೆ ನೌಕರರಿಗೆ ಇರುವ ಸಮಸ್ಯೆ ಬಹಳ. ಆದರೆ, ಅವರಿಗೆ ಸಮರ್ಪಕವಾದ ಸಂಬಳ ಸವಲತ್ತು ಇಲ್ಲ, ಜತೆಗೆ ಕಿರುಕುಳ ಹೆಚ್ಚಾಗಿವೆ ಎಂಬುವುದು ನಮ್ಮ ಗಮನಕ್ಕೂ ಇದೆ.
ಇನ್ನು ಕಿರುಕುಳ ಮುಕ್ತ ಪರಿಸರ ನಿರ್ಮಿಸಬೇಕಾಗಿದ್ದು, ಅಧಿಕಾರಿಗಳು ಮತ್ತು ನಾವು ಸೇರಿಕೊಂಡು ಈ ಬಗ್ಗೆ ಯೋಜನೆ ರೂಪಿಸುವ ಅಗತ್ಯವಿದೆ. ಜತೆಗೆ ಇಂದಿನ ಬೆಲೆ ಏರಿಕೆ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದ್ದಾಗ ಅತ್ಯಂತ ಕಡಿಮೆ ಸಂಬಳ ಪಡೆದು ಜೀವನ ಸಾಗಿಸುತ್ತಿರುವ ಸಾರಿಗೆ ನೌಕರರಿಗೆ ಸರಕಾರಿ ನೌಕರರ ಮಾದರಿ ಸಂಬಳ ಕೊಡಬೇಕು ಎಂಬ ಆಗ್ರಹ ಇದೆ ಎಂದು ಸಾರಿಗೆ ನೌಕರರ ಒಕ್ಕೂಟ ತಿಳಿಸಿದೆ ಎನ್ನುವ ಸಚಿವರು ಸಮಸ್ಯ ಪರಿಹಾರಕ್ಕೆ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಅಲ್ಲದೆ ಇಂದಿನ ಸಮಾಜದಲ್ಲಿ ಸಾರಿಗೆ ನೌಕರರು ಅಧಿಕಾರಿಗಳು ಕೂಡ ಸಂಘಟಿತರಾಗಬೇಕಾಗಿದೆ. ಸಂಘಟನೆಯಲ್ಲಿ ಶಕ್ತಿ ಇದೆ. ಕಳೆದ ನಾಲ್ಕು ವರ್ಷಗಳಿಂದಲೂ ಅಧಿವೇಶನಗಳಲ್ಲಿ ಸಾರಿಗೆ ನೌಕರರ ಸಮಸ್ಯೆ ಕುರಿತು ವಿಧಾನ ಪರಿಷತ್ ಸದ್ಯರು ಹಾಗೂ ಶಾಸಕರು ಕೂಡ ಧ್ವನಿ ಎತ್ತುತ್ತಲೇ ಬರುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಮೌನವಾಗಿಯೇ ಇದೆ.
ಇನ್ನು ನಮ್ಮ ಸಾರಿಗೆ ನೌಕರರು 2020ರ ಜನವರಿ 1ರಿಂದ ಅನ್ವಯವಾಗುವಂತೆ ಆಗಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಮತ್ತು 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಕೂಡಲೇ ಘೊಷಣೆ ಮಾಡಬೇಕು.
ನಮ್ಮ ಅಗತ್ಯ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ಕಾನೂನಾತ್ಮಕವಾಗಿಯೆ ಮುಷ್ಕರ ನಡೆಸಲು ಮುಂದಾದರು ಸರ್ಕಾರ ಬಿಡುತ್ತಿಲ್ಲ. ಆ ಸಮಯದಲ್ಲಿ ಸಂಬಳಕ್ಕಾಗಿ ಹೋರಾಟ ಮಾಡಿದ್ದ ನೌಕರಿರಿಗೆ ಸರ್ಕಾರ ಸವಲತ್ತು ಕೊಡುವ ಬದಲು ಶಿಕ್ಷೆ ಕೊಟ್ಟು ಅಮಾನವೀಯವಾಗಿ ನಡೆದುಕೊಂಡಿದೆ.

ಸಾರಿಗೆ ನೌಕರರಿಗೆ 2024ರಿಂದ ವೇತನ ಹೆಚ್ಚಳವಾಗಿಲ್ಲ. ಇನ್ನು 2020 ಜನವರಿ 1ರಿಂದ ಅನ್ವಯವಾಗಬೇಕಿರುವ ವೇತನಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಿಎಂ ಮಾತನಾಡುತ್ತಾರೆ. ಅಲ್ಲದೆ ನಾನೊಬ್ಬ ವಕೀಲ ಎಂದು ಹೇಳಿ ಯಾಮಾರಿಸುತ್ತಿದ್ದಾರೆ. ಇತ್ತ ಸಾರಿಗೆ ಸಚಿವರು ಬರಿ ಭರವಸೆಕೊಟ್ಟುಕೊಂಡೇ ಓಡಾಡುತ್ತಿದ್ದಾರೆ, ಈ ಭರವಸೆಯಿಂದ ನೌಕರರ ಹೊಟ್ಟೆ ತುಂಬುವದಿಲ್ಲ ಅಲ್ವಾ?
ಇನ್ನು ಪ್ರಮುಖವಾಗಿ ಸಾರಿಗೆ ನೌಕರರು ಪರಸ್ಪರ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳ ದಬ್ಬಾಳಿಕೆಗೆ ನಿಯಂತ್ರಣ ಇಲ್ಲದಂತಾಗುತ್ತದೆ. ಆಗ ಒತ್ತಡದಲ್ಲಿ ನೌಕರರು ಕರ್ತವ್ಯ ನಿರ್ವಹಿಸುವುದು ಇನ್ನೂ ಹೆಚ್ಚಾಗುತ್ತದೆ.
ಸಾರಿಗೆ ನಿಗಮಗಳ ಅಧಿಕಾರಿಳು/ ನೌಕರರಿಗೆ ಸೂಕ್ತ ಭದ್ರತೆ, ಭವಿಷ್ಯ ಇಲ್ಲ. ಹಗಲು ರಾತ್ರಿ ದುಡಿದರು ಸಮರ್ಪಕ ವೇತನ ಇಲ್ಲ. ಇಂತಹ ಸನ್ನಿವೇಶದಲ್ಲಿ ಅನೇಕ ನೌಕರರು ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂದೆ ಈ ರೀತಿ ಆಗಬಾರದು ಇದು ನಿಲ್ಲಬೇಕು.
ಈಗಲಾದರೂ ಸಾರಿಗೆ ನೌಕರರ ಪರ ಸಂಘಟನೆಗಳು ಸರ್ಕಾರ ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು ಎಂದು ಪಟ್ಟು ಹಿಡಿದು ಹೋರಾಟಕ್ಕೆ ಮುಂದಾಗಬೇಕು ಇಲ್ಲದಿದ್ದರೆ ಇದೇ ಸ್ಥಿತಿ ಮುಂದುವರಿಯುತ್ತಲೇ ಇರುತ್ತದೆ. ಸಾರಿಗೆ ಸಚಿವರು ಭರವಸೆಕೊಟ್ಟುಕೊಂಡು ಮುಂದೆ ಹೋಗುತ್ತಲೇ ಇರುತ್ತಾರೆ.
ಇನ್ನು ರಾಜ್ಯ ಸರ್ಕಾರದ ಯಾವುದೇ ಇಲಾಖೆ ಅಥವಾ ನಿಗಮ ಮಂಡಳಿಗಳ ಅಧಿಕಾರಿಗಳು/ ನೌಕರರು ಈ ರೀತಿ ಅಲ್ಪ ಸಂಬಳಕ್ಕೆ ಡ್ಯೂಟಿ ಮಾಡುತ್ತಿಲ್ಲ. ಆದರೆ ಸರ್ಕಾರ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಅನ್ಯಾಯ ಎಸಗುತ್ತಿದ್ದು, ಮೂರು ಕಾಸಿಗೆ ಸಾವಿರಾರು ರೂ. ಮೌಲ್ಯದ ಕೆಲಸ ಮಾಡಿಸಿಕೊಳ್ಳುತ್ತಿದೆ. ಇದು ರಾಜ್ಯದ ಸಾರಿಗೆ ನೌಕರರ ಮೂಲಭೂತ ಹಕ್ಕನ್ನೇ ಕಸಿದುಕೊಂಡಂತೆ ಆಗುತ್ತಿದೆ.
ಹೀಗಾಗಿ ಇನ್ನಾದರೂ ಎಲ್ಲ ಸರ್ಕಾರ ಇಲಾಖೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಕೊಡುತ್ತಿರುವ ರೀತಿಯಲ್ಲಿ ಕಾಲ ಕಾಲಕ್ಕೆ ವೇತನ ಇತರೆ ಸೌಲಭ್ಯಗಳನ್ನು ಸಾರಿಗೆ ನೌಕರರಿಗೂ ಸರ್ಕಾರ ನೀಡಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ ಕೂಡ ಆಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳು ಧ್ವನಿ ಎತ್ತಬೇಕಿದೆ.
Related
