ಮಂಡ್ಯ: ಜೀವನಾಡಿ ಕೆಆರ್ ಎಸ್ ಜಲಾಶಯ ಪ್ರಸಕ್ತ ವರ್ಷ ಭರ್ತಿಯಾಗುವುದಿರಲಿ, ನೀರಿನ ಮಟ್ಟ ನೂರರ ಗಡಿಯಲ್ಲಿ ನಿಂತರೆ ಅಷ್ಟೇ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕ ತಂದಿದೆ.
ಇನ್ನುಮುಂದೆ ಹಿಂಗಾರು ಮಳೆಯಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವುದು ಕಷ್ಟಸಾಧ್ಯವೇ.. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಿದ್ದೇ ಆದರೆ ಇಲ್ಲಿನ ಜನ ಕುಡಿಯಲು ನೀರು ಸಿಗದೆ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗುವುದಂತು ಖಚಿತ.
ತಮಿಳುನಾಡಿಗೆ ನೀರು ಹರಿಸದಂತೆ ರಾಜ್ಯದಲ್ಲಿ ಹೋರಾಟಗಳು ಆರಂಭವಾಗಿ ತಿಂಗಳೇ ಕಳೆದು ಹೋಗಿವೆ. ಹೋರಾಟಗಳು ನಡೆಯುತ್ತಿರುವಾಗಲೇ ಕೆಆರ್ ಎಸ್ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ಕರುನಾಡಿನ ಜನರಿಗೆ ಮರುಭೂಮಿಯಲ್ಲಿ ನೀರು ಸಿಕ್ಕಿದಷ್ಟೇ ಸಂತೋಷವಾಗಿತ್ತು. ಆದರೀಗ ಮತ್ತೆ ಆತಂಕ ಆವರಿಸುವಂತಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆ ಕಡಿಮೆಯಾಗಿದೆ ಪರಿಣಾಮ ಮೂರೇ ದಿನದಲ್ಲಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಸದ್ಯ ಒಳಹರಿವು 11,800 ಕ್ಯುಸೆಕ್ ನಿಂದ 4,046 ಕ್ಯುಸೆಕ್ ಗೆ ಇಳಿಕೆಯಾಗಿದೆ. ಇದರ ಪರಿಣಾಮ ಕಾವೇರಿ ನೀರನ್ನು ನಂಬಿದ್ದ ಜನರು ಮತ್ತು ರೈತರು ಆತಂಕ ಪಡುವಂತಾಗಿದೆ.
ಒಳಹರಿವು ಹೆಚ್ಚಳದಿಂದ ಜಲಾಶಯಕ್ಕೆ ಸುಮಾರು ಮೂರು ಟಿಎಂಸಿ ನೀರು ಹರಿದು ಬಂದಿತ್ತು. ಇದರಿಂದ 124 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 101.80 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಇದು ಆಶಾಭಾವನೆಯನ್ನು ಹುಟ್ಟು ಹಾಕಿತ್ತು. ಆದರೆ ಮತ್ತೆ ಒಳ ಹರಿವು ಕಡಿಮೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹಿಂಗಾರು ಎಷ್ಟೇ ಸುರಿದರೂ ಜಲಾಶಯದ ಒಳಹರಿವು ಹೆಚ್ಚುವುದು ಕಷ್ಟ ಸಾಧ್ಯ.
ಪರಿಸ್ಥಿತಿ ಈಗಲೇ ಹೀಗಾದರೆ ಮುಂದೇನು ಎಂಬ ಚಿಂತೆ ಕಾವೇರಿ ನೀರನ್ನು ನಂಬಿದ ಜನರನ್ನು ಕಾಡುತ್ತಿದೆ. ಇನ್ನೊಂದೆಡೆ ರೈತರು ಕಾವೇರಿ ನೀರನ್ನು ನಂಬಿ ಬೆಳೆ ಬೆಳೆಯುತ್ತಿದ್ದರು. ಆದರೆ ಈ ಬಾರಿ ಯಾವುದೇ ಕೃಷಿ ಮಾಡದಂತೆ ರೈತರಿಗೆ ಸೂಚನೆ ನೀಡಲಾಗಿದೆ. ಜತೆಗೆ ನಾಲೆಗಳಿಗೂ ನೀರು ಹರಿಯುತ್ತಿಲ್ಲ. ಕೃಷಿಯನ್ನೇ ನಂಬಿದ ರೈತರ ಬದುಕು ಮೂರಾ ಬಟ್ಟೆಯಾಗಿದೆ. ಮುಂದೇನು ಎಂಬುದು ಕಾವೇರಿ ನೀರು ಆಶ್ರಿತರ ಪ್ರಶ್ನೆಯಾಗಿದೆ.