ಲಾಲ್‌ಬಾಗ್: ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ಜೀವನ ಚರಿತ್ರೆ ಫಲಪುಷ್ಪಗಳಲ್ಲಿ ಅನಾವರಣ


ಬೆಂಗಳೂರು: ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ 218ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಅವರ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನ” ಉದ್ಘಾಟಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು 218ನೇ ವರ್ಷದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವಾಗಿದೆ. ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಿಗೆ ಗೌರವ ಸಲ್ಲಿಸುವ ಕೆಲಸ ಆಗಿದೆ ಎಂದು ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮಗೆ ಬ್ರಿಟಿಷರ ವಿರುದ್ಧ ಮೊದಲನೇ ಯುದ್ಧಗಳಲ್ಲಿ ಜಯ ಸಿಕ್ತು. ಎರಡನೇ ಯುದ್ಧದಲ್ಲಿ ಚೆನ್ನಮ್ಮನ ಸೆರೆಯಾಯಿತು. ಚೆನ್ನಮ್ಮನ ಬಲಗೈ ಬಂಟನಾಗಿದ್ದ ರಾಯಣ್ಣನಿಗೆ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆ ಆಯಿತು. ರಾಯಣ್ಣ ಹುಟ್ಟಿದ್ದು ಸ್ವಾತಂತ್ರ‍್ಯ ಸಿಕ್ಕ ದಿನವಾದರೆ, ಗಲ್ಲು ಶಿಕ್ಷೆ ಆಗಿದ್ದು ಗಣರಾಜ್ಯದ ದಿನ. ಇದು ಕಾಕತಾಳೀಯ ಅಂತಾನೇ ಎನ್ನಬಹುದು ಎಂದು ಹೇಳಿದರು.
ಇನ್ನು ಬ್ರಿಟಿಷರ ವಿರುದ್ಧ ರಾಯಣ್ಣ ವೀರಾವೇಶದಿಂದ ಹೋರಾಡಿದ್ದರು. ಬ್ರಿಟಿಷರನ್ನು ಸೋಲಿಸಿ 200 ವರ್ಷ ಆಯಿತು. ರಾಯಣ್ಣ ಹಿಂದುಳಿದ ಜಾತಿಗೆ ಸೇರಿದವರು, ಎಲ್ಲ ಸೈನ್ಯದಲ್ಲಿ ಎಲ್ಲ ಜಾತಿಯವರಿದ್ದರು. ಜಾತ್ಯಾತೀತರಾಗಿ ಎಲ್ಲರನ್ನೂ ಬಳಸಿಕೊಂಡು ಕಿತ್ತೂರು ಪ್ರಾಂತ್ಯ ಆಳಿದ್ದರು. ಚೆನ್ನಮ್ಮ ವೀರ ಮಹಿಳೆ ಹಾಗೂ ವೀರ ವನಿತೆಯೂ ಹೌದು. ಸರ್ಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆಚರಣೆ ಮಾಡಲಾಗುತ್ತದೆ. ಸಂಗೊಳ್ಳಿ ರಾಜಣ್ಣ ಅವರ ಪ್ರಾಧಿಕಾರ ಮಾಡಿದ್ದೇವೆ ಎಂದರು.
ಇಂದು ಈ ವೀರರನ್ನು ಸ್ಮರಿಸಬೇಕು. ತೋಟಗಾರಿಕೆ ಇಲಾಖೆಯಿಂದ ಇಂದು ಸ್ವಾತಂತ್ರ‍್ಯ ವೀರರಿಗೆ ಗೌರವ ಸಲ್ಲಿಸಲಾಗಿದೆ. ದೇಶಕ್ಕಾಗಿ ಹೋರಾಡಿದವರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಹೇಳಿದರು.

ಬಳಿಕ ಸಿಎಂ ಸಿದ್ದರಾಮಯ್ಯ ಅವರು ಫ್ಲವರ್ ಶೋ ವೀಕ್ಷಣೆ ಮಾಡಿದರು. ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ತೋಟಗಾರಿಕೆ ಇಲಾಖೆಯ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಮತ್ತಿತ್ತರು ಸಾಥ್ ನೀಡಿದರು.
ಆ.18ರವರೆಗೆ ಫ್ಲವರ್ ಶೋ: ಇಂದಿನಿಂದ (ಆ.7) ಆಗಸ್ಟ್ 18ರವರೆಗೆ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ನಡೆಯಲಿದ್ದು, ಈ ಬಾರಿ “ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನ”ವಾಗಿದೆ. ಈ ಸ್ವಾತಂತ್ರ‍್ಯ ವೀರರ ಜೀವನ ಚರಿತ್ರೆ ಫಲಪುಷ್ಪಗಳಲ್ಲಿ ಅನಾವರಣಗೊಂಡಿದದು, 18 ಅಡಿ ಎತ್ತರ, 32 ಅಡಿ ಅಗಲದ ಕಿತ್ತೂರು ಕೋಟೆಯ ಮಾದರಿ ನಿರ್ಮಾಣವಾಗಿದೆ. ಅದರ ಒಳಭಾಗದಲ್ಲಿ ಫಲಪುಷ್ಪಗಳ ಮೂಲಕ ಹೋರಾಟದ ಸ್ಮರಣೆ ಅನಾವರಣಗೊಂಡಿದೆ.
ರಾಣಿ ಅಬ್ಬಕ್ಕದೇವಿ, ರಾಣಿ ಚೆನ್ನಭೈರಾದೇವಿ, ರಾಣಿ ಬೆಳವಾಡಿ ಮಲ್ಲಮ್ಮ, ರಾಣಿ ಕೆಳದಿ ಚೆನ್ನಮ್ಮ, ಒನಕೆ ಓಬವ್ವ ಅವರ ಹೂವಿನ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಚಂದದ ಹೂದೋಟ ನೋಡುವುದಕ್ಕೆ ಇಂದಿನಿಂದ (ಆ.7) ಹನ್ನೊಂದು ದಿನಗಳವರೆಗೆ ಅವಕಾಶವಿದೆ.
ಪ್ರವೇಶ ಶುಲ್ಕ ಎಷ್ಟು?: ಸಾಮಾನ್ಯ ದಿನಗಳಲ್ಲಿ ಈ ಫಲಪುಷ್ಪ ಪ್ರದರ್ಶನ ನೋಡಲು ಬರುವ ವಯಸ್ಕರಿಗೆ 80 ರೂ., ಮಕ್ಕಳಿಗೆ 30 ರೂ. ಹಾಗೂ ಶನಿವಾರ, ಭಾನುವಾರ ರಜಾದಿನಗಳಲ್ಲಿ ವಯಸ್ಕರಿಗೆ 100 ರೂ., ಮಕ್ಕಳಿಗೆ 30 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Related
