NEWSನಮ್ಮಜಿಲ್ಲೆಬೆಂಗಳೂರು

ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ.

ಇಂದು ಬೆಳ್ಳಗ್ಗೆ 10.30ರ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಾರ್ವಜನಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಮುಕ್ತಗೊಳಿಸಲಿದ್ದಾರೆ.

ಬಿಡಿಎ ಎರಡು ವರ್ಷಗಳಿಂದ ಹೆಬ್ಬಾಳ ವಿಸ್ತರಿತ ಫ್ಲೈ ಓವರ್ ಕಾಮಗಾರಿ ನಡೆಸಿದ್ದು ಇದೀಗ ಈ ಕಾಮಗಾರಿ ಪೂರ್ಣಗೊಂಡಿದೆ. ಹೀಗಾಗಿ ಇಂದು ಹೆಬ್ಬಾಳ ಪ್ಲೈ ಓವರ್ ಉದ್ಘಾಟನೆ ಮಾಡಲಾಗುತ್ತಿದೆ.

ಇನ್ನು ಇತ್ತ ಉದ್ಘಾಟನೆಗೆ ಸಿದ್ಧತೆ ಆಗಿದ್ದು ಫ್ಲೈಓವರ್‌ಗೆ ಹೂವಿನ ಹಾರ ಹಾಕಿ ಸಿಂಗಾರ ಮಾಡಲಾಗಿದೆ. 700 ಮೀಟರ್ ಉದ್ದದ ಈ ಫ್ಲೈ ಓವರ್‌ನಿಂದ ಕೆ.ಆರ್.ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಸಾಗಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವುದಕ್ಕೆ ದ್ವಿಪಥ ರಸ್ತೆ ಮಾತ್ರ ಇದ್ದು. ಕೆ.ಆರ್.ಪುರ ಕಡೆಯಿಂದ ಬರುವ ರಸ್ತೆ ಇದನ್ನು ಸೇರಿಕೊಳ್ಳುತ್ತದೆ. ವಿಮಾನ ನಿಲ್ದಾಣ ಕಡೆಯಿಂದ ನಗರದ ಕಡೆಗೆ ಪ್ರಯಾಣಿಸುವ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ.

ಈ ಸಂಚಾರ ದಟ್ಟಣೆ ನಿವಾರಿಸಲು ಹೆಬ್ಬಾಳ ಫ್ಲೈಓವರ್ ಬಳ್ಳಾರಿ ರಸ್ತೆ, ವಿಮಾನ ನಿಲ್ದಾಣ ಮತ್ತು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಫ್ಲೈ ಓವರ್ ಸಂಚಾರಕ್ಕೆ ಮುಕ್ತಗೊಂಡ ನಂತರ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ.

ಹೆಬ್ಬಾಳ ಫ್ಲೈಓವರ್ ಉದ್ಘಾಟನೆಗೆ ಸಾರ್ವಜನಿಕರು ಖುಷಿ ವ್ಯಕ್ತಪಡಿಸಿದ್ದಾರೆ. ಆದರೆ ಪ್ಲೈ ಓವರ್‌ನಿಂದ ಬಂದ ವಾಹನಗಳು ಮೇಖ್ರೀ ಸರ್ಕಲ್ ಕಡೆಗೆ ಹೋಗೋದಕ್ಕೆ ಇಲ್ಲಿ ಬಂದು ನಿಲುಗಡೆ ಆಗ್ತಾವೆ ಮೇಖ್ರೀ ಸರ್ಕಲ್ ಉದ್ದಕ್ಕೂ ಮತ್ತೆ ಟ್ರಾಫಿಕ್ ಜಾಮ್ ಅಗುತ್ತದೆ ಎಂದು ಹೇಳುತ್ತಿದ್ದಾರೆ ವಾಹನ ಸವಾರರು.

ಒಟ್ಟಾರೆ ಹೆಬ್ಬಾಳ ವಿಸ್ತರಿತ ಫ್ಲೈ ಓವರ್ ಇಂದು ಉದ್ಘಾಟನೆ ಆಗುತ್ತಿದ್ದು, ಹೆಬ್ಬಾಳ ಸುತ್ತಮುತ್ತ, ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಗಲಿದೆ ಎಂಬುವುದರಲ್ಲಿ ಯಾವುದೇ ಡೌಟ್‌ ಇಲ್ಲ.

Megha
the authorMegha

Leave a Reply

error: Content is protected !!