ರಾಜ್ಯಕ್ಕೆ ಮೋದಿ ಸರ್ಕಾರ ಎರಡೂವರೆ ವರ್ಷಗಳಲ್ಲಿ ಮಾಡಿದ ದ್ರೋಹಗಳು ಒಂದೆರೆಡಲ್ಲ: ಸಿಎಂ ಸಿದ್ದರಾಮಯ್ಯ ಆರೋಪ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರವಿದೆ ಎನ್ನುವ ಏಕೈಕ ಕಾರಣಕ್ಕೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಳೆದ ಎರಡೂವರೆ ವರ್ಷಗಳಲ್ಲಿ ಮಾಡಿದ ದ್ರೋಹಗಳು ಒಂದೆರೆಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆಯಲ್ಲಿ ನ್ಯಾಯಯುತ ಪಾಲು ನೀಡದೆ ವಂಚಿಸುತ್ತಿರುವುದಲ್ಲದೆ, ಕರ್ನಾಟಕದ ನೀರಾವರಿ, ರೈಲ್ವೆ, ಹೆದ್ದಾರಿ ಸೇರಿದಂತೆ ಎಲ್ಲಾ ತೆರನಾದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಮತ್ತು ಅನುಮತಿ ನೀಡದೆ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಗೆ ಮತ ನೀಡದಿದ್ದರೆ ಮೋದಿಯವರ ಆಶೀರ್ವಾದದಿಂದ ವಂಚಿತರಾಗುತ್ತೀರಿ ಎನ್ನುವ ಬೆದರಿಕೆ ಒಡ್ಡಿದ್ದ ಬಿಜೆಪಿ ನಾಯಕ ಜೆ.ಪಿ.ನಡ್ಡಾ ಅವರ ಹೇಳಿಕೆಯನ್ನು ಅಕ್ಷರಶಃ ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತಂದಂತಿದೆ.
ಬಿಜೆಪಿ ಪಕ್ಷದಿಂದ ಗೆದ್ದು ಸಂಸದರು ಮತ್ತು ಕೇಂದ್ರದಲ್ಲಿ ಮಂತ್ರಿಗಳು ಆಗಿರುವವರಿಗೆ ಪ್ರಧಾನಿಗಳ ಎದುರು ಈ ಮಲತಾಯಿ ಧೋರಣೆಯ ವಿರುದ್ಧ ಮಾತನಾಡುವ ಧೈರ್ಯವಾಗಲಿ, ಮತನೀಡಿದ ಜನರ ಬಗ್ಗೆ ಕಾಳಜಿಯಾಗಲಿ ಯಾವುದೂ ಇಲ್ಲ. ಮೈಕ್ ಮುಂದೆ ಏರುದನಿಯಲ್ಲಿ ದ್ವೇಷ ಬಿತ್ತುವ ಇವರಿಗೆ ಮೋದಿಯವರನ್ನು ಕಂಡೊಡನೆ ಕೈಕಾಲು ನಡುಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಕನ್ನಡಿಗರಿಗೆ ಇಷ್ಟೆಲ್ಲ ಅನ್ಯಾಯಗಳು ಆಗುತ್ತಿದ್ದರೂ ಅದರ ವಿರುದ್ಧ ದನಿಯೆತ್ತದೆ ಕೇವಲ ಸ್ವಹಿತಕ್ಕಾಗಿ ಕೇಂದ್ರ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಮತ್ತು ಅದರ ನಾಯಕ ಎಚ್.ಡಿ.ಕುಮಾರಸ್ವಾಮಿ ನಡೆ ಅಸಹ್ಯ ಹುಟ್ಟಿಸುವಂತಿದೆ ಎಂದು ಹೇಳಿದ್ದಾರೆ.
ಇನ್ನು ಒಂದು ಸಚಿವ ಸ್ಥಾನಕ್ಕಾಗಿ ಇಷ್ಟೆಲ್ಲ ನಡುಬಗ್ಗಿಸಿ ನಿಲ್ಲಬೇಕೇ? ಇದು ನನ್ನೊಬ್ಬನ ಪ್ರಶ್ನೆ ಅಲ್ಲ, ನೊಂದ ಕನ್ನಡಿಗರೆಲ್ಲರ ಪ್ರಶ್ನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್‌ಡಿಕೆ ಅವರನ್ನು ಪ್ರಶ್ನಿಸಿದ್ದಾರೆ.
Related









