- ಮೈಸೂರಿನಲ್ಲಿ ರಾಜ್ಯ ಕುಂಬಾರರ ಮಹಾ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿಗಳು
ಮೈಸೂರು: ಕುಂಬಾರ ಸಮುದಾಯದವರು ಅತ್ಯಂತ ಹಿಂದುಳಿದ ಮತ್ತು ಕಡಿಮೆ ಜನಸಂಖ್ಯೆಯಿರುವ ಸಮುದಾಯವಾಗಿದೆ. ಕಾಯಕ ಯೋಗಿಗಳಾಗಿರುವ ಕುಂಬಾರ ಸಮಾಜದವರು ಮಣ್ಣಿನ ಕಲಾಕೃತಿಗಳನ್ನು ನಿರ್ಮಿಸುವ ಕಲೆಯ ಪರಿಣಿತಿ ಹೊಂದಿದ್ದಾರೆ. ಜ್ಞಾನದ ಬೆಳಕು ನೀಡಿದ ಕವಿ ಸರ್ವಜ್ಞರು, ಈ ಸಮುದಾಯಕ್ಕೆ ಸೇರಿರುವುದು ಹೆಮ್ಮೆಯ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ನಗರದಲ್ಲಿ ಮೈಸೂರು ಜಿಲ್ಲಾ ಕುಂಬಾರ ಸಂಘ ಆಯೋಜಿಸಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಮತ್ತು ದಾಸೋಹಗಳನ್ನು ಸಮಾಜಕ್ಕೆ ನೀಡಿದರು. ಚತುರ್ವರ್ಣ ವ್ಯವಸ್ಥೆ ಹಿಂದಿನಿಂದಲೂ ಬಂದಿರುವ ವ್ಯವಸ್ಥೆ. ಆರ್ಥಿಕವಾಗಿ ಹಿಂದುಳಿದ ಶೂದ್ರ ವರ್ಗದವರು ಜನಸಂಖ್ಯೆಯ ಸುಮಾರು ಶೇ.80 ರಷ್ಟಿದ್ದು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ ಎಂದರು.
ಶಿಕ್ಷಣದ ಮಹತ್ವವನ್ನು ಮನಗಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದರು. ಶಿಕ್ಷಣವಿಲ್ಲದಿದ್ದರೆ ನಾವು ಮನುಷ್ಯರಾಗಲು ಸಾಧ್ಯವಿಲ್ಲ ಹಾಗೂ ಸ್ವಾಭಿಮಾನಿಗಳಾಗಿ ಬದುಕಲಾಗುವುದಿಲ್ಲ. ಅಂಬೇಡ್ಕರ್ ಅವರು ಸಂವಿಧಾನ ನೀಡಿದ ಮೇಲೆ ಎಲ್ಲರಿಗೂ ಸಮಾನ ಅವಕಾಶಗಳು ದೊರಕಿತು. ಸ್ವಾತಂತ್ರ್ಯ ಬಂದ ನಂತರ ನಮ್ಮಲ್ಲಿ ಅನೇಕರು ವಿದ್ಯಾವಂತರಾಗಲು ಸಾಧ್ಯವಾಯಿತು ಎಂದು ಹೇಳಿದರು.
ಇನ್ನು ಬೇಡರ ಜಾತಿಗೆ ಸೇರಿದ ವಾಲ್ಮೀಕಿ ರಾಮಾಯಣ ಬರೆದರು. ಬೆಸ್ತರ ಜಾತಿಗೆ ಸೇರಿದ ವ್ಯಾಸ ಮಹರ್ಷಿಗಳು ಮಹಾಭಾರತವನ್ನು ಬರೆದರು. ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ರತ್ನಪ್ಪ ಭರಮಪ್ಪ ಕುಂಬಾರರು ಸಮುದಾಯದ ಧೀಮಂತ ನಾಯಕರಾಗಿದ್ದರು ಎಂದು ತಿಳಿಸಿದರು.
ಜಾತಿ ವ್ಯವಸ್ಥೆಯನ್ನು ತಂದು ಜನರ ದಾರಿ ತಪ್ಪಿಸಲಾಗಿದೆ. ನಾನು ವಕೀಲ ಶಿಕ್ಷಣ ಪಡೆದಿದ್ದರಿಂದಲೇ ಇಂದು ಮುಖ್ಯಮಂತ್ರಿಯಾಗಿ ನಿಮ್ಮೆದುರಿರಲು ಸಾಧ್ಯವಾಗಿದೆ. ಮಹಾನ್ ಜ್ಞಾನಿಯಾಗಿದ್ದ ಶ್ರೀ ನಾರಾಯಣ ಗುರುಗಳು, ಒಂದೇ ಧರ್ಮ, ಒಂದೇ ಜಾತಿ ಎಂದು ಪ್ರತಿಪಾದಿಸಿದರು. ಅಸ್ಪೃಶ್ಯತೆಯಿಂದ ದೇಗುಲಗಳಿಗೆ ಪ್ರವೇಶ ನಿರ್ಬಂಧಿಸುತ್ತಿದ್ದ ಕಾಲದಲ್ಲಿ, ‘ನಿಮ್ಮದೇ ದೇವಾಲಯಗಳನ್ನು ನಿರ್ಮಿಸಿಕೊಳ್ಳಿ’ ಎಂದು ಜನರಿಗೆ ಕರೆ ನೀಡಿದ್ದರು.
ಕುಂಬಾರ ಸಮುದಾಯದ ಬೇಡಿಕೆಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು. ಸಮುದಾಯದವರಿಗೆ ಬಿಡಿಎ ನಿವೇಶನ ಪಡೆಯಲು ಸೂಕ್ತ ಅನುದಾನ ನೀಡುವ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಕುಂಬಾರ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅನುದಾನ ನೀಡಲಾಗುವುದು. ಕುಂಬಾರ ಸಮಾಜದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಮಾಣೀಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬಿಜಾಪುರ ತೆಲಸಂಗದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಹಾಗೂ ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿಗಳ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ವೆಂಕಟೇಶ್, ಉತ್ತರ ಪ್ರದೇಶ ಸರ್ಕಾರದ ಸಚಿವರಾದ ಧರ್ಮವೀರ್ ಪ್ರಜಾಪತಿ, ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಸೇರಿ ಜಿಲ್ಲೆಯ ಶಾಸಕರು ಮತ್ತು ನಾಯಕರು ಹಾಗೂ ಕುಂಬಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕುಂಬಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ|| ಶ್ರೀನಿವಾಸನ್ ವೇಲು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
Related










