ಬೆಂಗಳೂರು: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಈ ದರ ನಾಳೆಯಿಂದಲೇ ಅನ್ವಯವಾಗಲಿದೆ.
ನಂದಿನಿ ಹಾಲಿನ ದರ ಹೆಚ್ಚಿಸಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೆಎಂಎಫ್) ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗೋಷ್ಠಿ ನಡೆಸಿ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದಾರೆ.
ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಸೇರಿಸಲಿದ್ದು, ಇಷ್ಟು ದಿನ ಪ್ರತಿ ಲೀಟರ್‌ಗೆ 42 ರೂಪಾಯಿ, ಅರ್ಧ ಲೀಟರ್‌ಗೆ 22 ರೂ. ಇತ್ತು. ಇನ್ನು ಮುಂದೆ ಪ್ರತಿ ಲೀಟರ್‌ಗೆ 44 ರೂಪಾಯಿ ಹಾಗೂ ಅರ್ಧ ಲೀಟರ್‌ಗೆ 24 ರೂಪಾಯಿ ಆಗಲಿದೆ ಎಂದು ತಿಳಿಸಿದರು.
ಇಷ್ಟು ದಿನ ಒಂದು ಲೀಟರ್ ಹಾಲು 42 ರೂಪಾಯಿ ಇತ್ತು. ಆದರೆ ಈ ಬೆಲೆಯಲ್ಲಿ 2 ರೂಪಾಯಿಯನ್ನು ಹೆಚ್ಚಳ ಮಾಡಲಾಗಿದ್ದು ಇನ್ಮುಂದೆ ಪ್ರತಿ ಲೀಟರ್ ಹಾಲು 44 ರೂಪಾಯಿ ಆಗಲಿದೆ. ಅದರಂತೆ ಅರ್ಧ ಲೀಟರ್ ಹಾಲು 22 ಇತ್ತು. ಇದರಲ್ಲೂ 2 ರೂಪಾಯಿಯನ್ನು ಏರಿಕೆ ಮಾಡಲಾಗಿದ್ದು 24 ರೂಪಾಯಿ ಆಗಲಿದೆ ಎಂದು ಕೆಎಂಎಫ್ ಅಧಿಕಾರಿಗಳು ಹೇಳಿದ್ದಾರೆ.
ಇನ್ಮುಂದೆ ಪ್ರತಿ ಪಾಕೆಟ್ನಲ್ಲಿ 1 ಲೀಟರ್ ಹಾಲಿನ ಬದಲಿಗೆ 1050 ಎಂಎಲ್ ಹಾಲು ಇರುತ್ತದೆ. ಅದರಂತೆ ಅರ್ಧ ಲೀಟರ್ ಹಾಲಿನ ಪಾಕೆಟ್ ಬದಲಿಗೆ 550 ಎಂಎಲ್ ಹಾಲು ಬರುತ್ತದೆ. ಪ್ರತಿ ಹಾಲಿನ ಪಾಕೆಟ್ 50 ಎಂಎಲ್ ಹೆಚ್ಚುವರಿ ಹಾಲನ್ನು ಹೊಂದಿರುತ್ತದೆ. ಹೀಗಾಗಿಯೇ ಹಾಲಿನ ದರದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ವಿವರಿಸಿದರು.