ಬೆಂಗಳೂರು: ನನ್ನ ಮೊಮ್ಮಗಳ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು RCB ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೃತಪಟ್ಟ ಯಲಹಂಕದ ದಿವ್ಯಾನ್ಷಿಯ ಅಜ್ಜ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬುಧವಾರ 4:30ಕ್ಕೆ ಕರೆ ಮಾಡಿ ದಿವ್ಯಾನ್ಷಿ ಮೃತಪಟ್ಟ ಬಗ್ಗೆ ತಿಳಿಸಿದರು. ಈ ಸಾವಿಗೆ ಸರ್ಕಾರವೇ ಕಾರಣ, ಸರಿಯಾದ ವ್ಯವಸ್ಥೆ ಮಾಡದೆ ಈರೀತಿ ಮಕ್ಕಳನ್ನು ಬಲಿಪಡೆದುಕೊಂಡಿದೆ ಎಂದು ಕಣ್ಣೀರಾಕಿದರು.
ಇನ್ನು ಇಂದು ಸಂಜೆ ಆಂಧ್ರದ ಅನ್ನಮಯ ಜಿಲ್ಲೆಗೆ ಮೃತದೇಹ ಶಿಫ್ಟ್ ಮಾಡುತ್ತೇವೆ. ನನ್ನ ಮೊಮ್ಮಗಳ ಸಾವಿಗೆ ಸರ್ಕಾರವೇ ನೇರ ಹೊಣೆ. ಯಾವುದೇ ಪೊಲೀಸ್ ಇರಲಿಲ್ಲ ಎಂದು ಕಿಡಿಕಾರಿದರು.
ಗೇಟ್ ನಂಬರ್ 15ರ ಒಳಗೆ ಹೋದಾಗ ಈ ಘಟನೆ ನಡೆದಿದೆ. ಬಿದ್ದ ಮೊಮ್ಮಗಳನ್ನು ಜೊತೆಗೆ ಇದ್ದವರೇ ಆಟೋದಲ್ಲಿ ಕರೆದುಕೊಂಡು ಹೋದರು. ಸರ್ಕಾರ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎಂದು ಗೋಳಾಡುತ್ತಿದ್ದಾರೆ.
ಇನ್ನು ತಾಯಿ ಮತ್ತು ಚಿಕ್ಕಮ್ಮ ಜೊತೆಗೆ ಹೋಗಿದ್ದರು ಆದರೆ ನನ್ನ ಮಗಳು ವಾಪಸ್ ಹೆಣವಾಗಿ ಬಂದಿದ್ದಾಳೆ. ಈ ನೋವ ಯಾರಿಗೂ ಬೇಡ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಮೊಮ್ಮಗಳು 9ನೇ ತರಗತಿ ಓದುತ್ತಿದ್ದಳು. ದಿವ್ಯಾನ್ಷಿ ಕಾಲ್ತುಳಿತದ ವೇಳೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. ಸದ್ಯ ದಿವ್ಯಾನ್ಷಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

ಶಿವಕುಮಾರ್ ಹಾಗೂ ಅಶ್ವಿನಿ ದಂಪತಿಯ ಮಗಳಾದ ದಿವ್ಯಾನ್ಷಿ ಚಿಕ್ಕಮ್ಮ ರಚನಾ ಹಾಗೂ ಇನ್ನಿಬ್ಬರ ಜೊತೆ ಆರ್‌ಸಿಬಿ ಸಂಭ್ರಮಾಚರಣೆ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದಳು. ನೂಕುನುಗ್ಗಲಿನಲ್ಲಿ ಕಾಲ್ತುಳಿತ ಉಂಟಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. ಯಲಹಂಕದ ಚೌಡೇಶ್ವರಿ ಲೇ ಔಟ್ ಮನೆಗೆ ದಿವ್ಯಾನ್ಷಿಯ ಮೃತದೇಹ ರವಾನಿಸಲಾಗಿದೆ. ಯಲಹಂಕದಲ್ಲಿ ದಿವ್ಯಾಂಶಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
Related

 










