ಮೈಸೂರು: ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲೆಯ ರೈತರು ಮೈಸೂರು ಕೊಡಗು ಸಂಸದರಾದ ಪ್ರತಾಪ್ ಸಿಂಹರವರ ಕಚೇರಿ ಬಳಿ ಜಮಾಯಿಸಿ ಮುತ್ತಿಗೆ ಹಾಕಲು ಯತ್ನಿಸಿದಾಗ ಕಚೇರಿಗೆ ಪ್ರವೇಶ ಮಾಡದಂತೆ ಪೊಲೀಸರು ತಡೆದರು.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನೆಕಾರರ ಮಧ್ಯೆ ಮಾತಿನ ಚಕ ಮಕಿ ನಡೆಯಿತು. ನೀವು ನಮ್ಮನ್ನು ಏಕೆ ತಡೆಗಟ್ಟುತ್ತಿದ್ದೀರಿ ನಮ್ಮ ಕ್ಷೇತ್ರದ ಸಂಸದರನ್ನು ನಾವು ಭೇಟಿ ಮಾಡಿ ರೈತರ ಸಮಸ್ಯೆ ಕುರಿತು ಒತ್ತಾಯಿಸಲು ಬಂದಿದ್ದೇವೆ ನಾವು ಬರುತ್ತೇವೆ ಎಂದು ಗೊತ್ತಿದ್ದರೂ ಸಹ ರೈತರಿಗೆ ಹೆದರಿ ಸಂಸದರು ಕಾಣೆಯಾಗಿದ್ದಾರೆ ಎಂದು ಕಿಡಿಕಾರಿದರು.
ರೈತ ವಿರೋಧಿ ಸಂಸದರಿಗೆ ಧಿಕ್ಕಾರ, ಕಾಣೆಯಾದ ಸಂಸದರನ್ನು ಹುಡುಕಿ ಕೊಡಿ. ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯಲು ವಿಫಲವಾಗಿರುವ ಸಂಸದರಿಗೆ ಧಿಕ್ಕಾರ. ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಕುಳಿತರು.
ಸ್ಥಳಕ್ಕೆ ಬಂದ ಆಪ್ತ ಸಹಾಯಕ ನಿಮ್ಮ ಮನವಿಯನ್ನು ಸ್ವೀಕರಿಸಿ ಸಂಸದರಿಗೆ ತಲುಪಿಸುತ್ತೇನೆ ಎಂದು ಮನವಿ ಮಾಡಿಕೊಂಡರು. ನಂತರ ಅವರಿಗೆ ಎಚ್ಚರಿಕೆ ನೀಡಿ ರೈತರ ಒತ್ತಾಯ ಪತ್ರವನ್ನು ಪ್ರಧಾನ ಮಂತ್ರಿಗಳ ಗಮನಕ್ಕೆ ತುರ್ತಾಗಿ ತಲುಪಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಲಾಯಿತು.
ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಶಾಸನ ಜಾರಿ ಆಗಲೇಬೇಕು. ದೇಶದ ರೈತರ ಸಂಪೂರ್ಣ ಸಾಲಮನ್ನಾ ಆಗಲೇಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು. ಭಾರತ ಸರ್ಕಾರ ಡಬ್ಲ್ಯೂ ಟಿ ಓ ಒಪ್ಪಂದದಿಂದ ಹೊರಬರಬೇಕು. ಕಳೆದ ಒಂದುವರೆ ವರ್ಷ ದೆಹಲಿ ಗಡಿಯಲ್ಲಿ ಹೋರಾಟ ಮಾಡಿ ಪ್ರಾಣ ಕಳೆದುಕೊಂಡ 750 ರೈತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ದೊರೆಯಲೇಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿದರು.
ನಾವು ಯಾರು ದೇಶದ್ರೋಹಿಗಳಲ್ಲ, ರೈತರ ಕೆಣಕಿ ಉಳಿದವರಿಲ್ಲ ಎಂಬುದನ್ನು ಅರಿತುಕೊಳ್ಳಿ. ಇದು ನಮ್ಮ ಎಚ್ಚರಿಕೆ ಸಂದೇಶ. ಮುಂದೆ ಚುನಾವಣೆ ಸಮಯದಲ್ಲಿ ನಮ್ಮ ಹಳ್ಳಿಗಳಿಗೆ ಬಂದರೆ ಮುಖಕ್ಕೆ ಸಗಣಿ ಎರಚುವ ಕೆಲಸ ಮಾಡಿ ಸೋಲಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ , ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ಮುಖಂಡರಾದ ಹೆಗ್ಗೂರು ರಂಗರಾಜ್, ಅಂಬಳೆ ಮಂಜುನಾಥ್, ಕಾಟೂರು ಮಾದೇವಸ್ವಾಮಿ, ಶ್ರೀಕಂಠ, ಚುಂಚುರಾಯನಹುಂಡಿ ಗಿರೀಶ್, ಸಿದ್ದರಾಮ, ಕೂಡನಹಳ್ಳಿ ಸೋಮಣ್ಣ, ಗಣೇಶ್, ಮಾರ್ಬಳ್ಳಿ ಬಸವರಾಜು, ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ, ಮಹೇಶ್, ಕರುವಟ್ಟಿ ಉಮೇಶ್, ಯಾಕ ನೂರು ಚಂದ್ರ, ಮಲ್ಲೇಶ್, ಕುಪ್ಪೆ ಮಾದೇವ ಸೇರಿ ಸುಮಾರು ನೂರಕ್ಕೂ ಹೆಚ್ಚು ರೈತರು ಇದ್ದರು.