ಸರ್ಕಾರಿ ಸಂಸ್ಥೆ ಬಸ್‌ಗಳ ಚಾಲಕ ನಿರ್ವಾಹಕರ ಮನೆಯಲ್ಲೂ ದೊಡ್ಡದೊಡ್ಡ ಹುದ್ದೆ ಕಂಪನಿ ಹೊಂದಿರುವ ಮಂದಿ ಇದ್ದಾರೆ- ಸೇವಾ ನಿರತ ಸಿಬ್ಬಂದಿಯ ಕೀಳಾಗಿ ನೋಡಬೇಡಿ



ಬೆಳಗಾವಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಪ್ರಯಾಣ ಬೆಳೆಸುವವರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಪ್ರಮುಖವಾಗಿ ಸಾಮಾನ್ಯ ತಿಳಿವಳಿಕೆ ಹೊಂದಿರಬೇಕು. ಕಾರಣ ನಿಮ್ಮ ಸೇವೆ ಮಾಡುವ ಚಾಲಕ ಮತ್ತು ನಿರ್ವಾಹಕರು ಕೂಡ ಮನುಷ್ಯರೆ ಜತೆಗೆ ಅವರಿಗೆ ಅವರದೇ ಆದ ಗೌರವವಿರುತ್ತದೆ.
ಇನ್ನು ಹೇಳಬೇಕು ಎಂದರೆ ಚಾಲಕ ಮತ್ತು ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವವರ ಕುಟುಂಬದ ಹಲವಾರು ಮಂದಿ ಐಎಎಸ್, ಐಪಿಎಸ್, ವೈದ್ಯರು, ಇಂಜಿನಿಯರ್ ಹೀಗೆ ದೊಡ್ಡದೊಡ್ಡ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಹುದ್ದೆಗಳಲ್ಲಿ ಇದ್ದಾರೆ. ಇನ್ನು ಕೆಲವರು ನೂರಾರು ಜನರಿಗೆ ಕೆಲಸವನ್ನು ಕೊಡುವ ಕಚೇರಿಗಳನ್ನು ಹೊಂದಿದ್ದಾರೆ. ಜತೆಗೆ ಅವರ ಮಕ್ಕಳು ಇಲ್ಲ ಅವರ ಪತಿ, ಪತ್ನಿಯರು ಲಕ್ಷಾಂತರ ವೇತನ ಪಡೆಯುವ ಹುದ್ದೆಯಲ್ಲೂ ಇದ್ದಾರೆ.
ಆದರೆ, ಕೆಲ ಪ್ರಯಾಣಿಕರಿಗೆ ಚಾಲಕ ನಿರ್ವಾಹಕರು ಎಂದರೆ ಒಂದುರೀತಿ ತಾತ್ಸಾರದಿಂದ ಕೀಳಾಗಿ ಕಾಣುವ ಮನೋಸ್ಥಿತಿ ಇದೆ. ಇದನ್ನು ಮೊದಲು ಬಿಡಬೇಕು ಚಾಲಕ ನಿರ್ವಾಹಕರು ವೇತನಕ್ಕಾಗಿ ಡ್ಯೂಟಿ ಮಾಡುತ್ತಿದ್ದಾರೆ ಎಂಬುವುದು ನೂರಕ್ಕೆ ನೂರರಷ್ಟು ಸತ್ಯವಾದರೂ ಅವರು ನಿಮ್ಮ ಸೇವೆ ಮಾಡುವ ಮೂಲಕ ಸಾರ್ವಜನಿಕ ಸೇವಕರಾಗಿ ನಿಮ್ಮನ್ನು ಸುರಕ್ಷಿತವಾಗಿ ನೀವು ತಲುಪಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
ಈ ಎಲ್ಲದರ ನಡುವೆ ಸರ್ಕಾರ ಕೂಡ ಕಳೆದ ಹತ್ತಾರು ವರುಷಗಳಿಂದಲೂ ಕೂಡ ನೌಕರರಿಗೆ ಸರಿಯಾದ ವೇತನ ಸೌಲಭ್ಯ ಮತ್ತು ಇತರೆ ಭತ್ಯೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಕೊಡುತ್ತಿಲ್ಲ. ಆದರೂ ಕೂಡ ನಿಮ್ಮ ಸೇವೆಯಲ್ಲಿ ಕಿಂಚಿತ್ತು ಲೋಪವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಡ್ಯೂಟಿಯಲ್ಲಿ ನಿರಂತವಾಗಿ ನಿಂತುಕೊಂಡು ಟಿಕೆಕಟ್ ವಿತರಿಸುತ್ತಾ ಹಾಗೂ ಬಸ್ ಚಾಲನೆ ಮಾಡುತ್ತಿರುವುದರಿಂದ ಅವರೂ ಕೂಡ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಳ್ಳಬಹುದು. ಆ ವೇಳೆ ಅವರಿಗೆ ಸಹಕಾರ ನೀಡುವ ಮೂಲಕ ತಾವು ತಲುಪಬೇಕಾದ ಸ್ಥಳಕ್ಕೆ ಟಿಕೆಟ್ ಕೇಳಿ ಪಡೆದುಕೊಳ್ಳುವುದು ಒಳ್ಳೆಯ ರೀತಿ ಮಾತನಾಡಿಸುವುದರಿಂದ ಅವರ ಮನಸ್ಸುಕೂಡ ಹಗುರವಾಗುತ್ತದೆ ಅಲ್ಲವೇ?
ಆದರೆ, ಇತ್ತೀಚೆಗೆ ಚಾಲಕ ಮತ್ತು ನಿರ್ವಾಹಕರ ಜತೆ ಗಲಾಟೆ ಮಾಡಿಕೊಳ್ಳುವವರೆ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಇಲ್ಲಿ ಯಾರದೇ ತಪ್ಪಿದ್ದರೂ ಕೂಡ ಚಾಲನಾ ಸಿಬ್ಬಂದಿಗಳ ವಿರುದ್ಧವೇ ಸಂಸ್ಥೆಯ ಮೇಲಧಿಕಾರಿಗಳು ಕೂಡ ಕ್ರಮ ತೆಗೆದುಕೊಳ್ಳುತ್ತಾರೆ. ಇದರಿಂದ ಕೆಲ ಪ್ರಯಾಣಿಕರು ತಾವು ನಡೆದುಕೊಳ್ಳುತ್ತಿರುವುದೇ ಸರಿ ಎಂಬಂತೆ ದುಂಡಾವರ್ತನೆ ತೋರಿಸುವುದಲ್ಲದೆ ಹಲ್ಲೆ ಮಾಡುವುದಕ್ಕೂ ಮುಂದಾಗುತ್ತಾರೆ. ಇದಕ್ಕೆ ಕಡಿವಾಣ ಬೀಳಬೇಕಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕಿದೆ.
ಇನ್ನು ನಿರ್ವಾಹಕರು ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದರು ಕೆಲವರು ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ನಮಗೂ ಅವರು ಕೇಳುತ್ತಿರುವುದಕ್ಕೂ ಸಂಬಂಧವೇ ಇಲ್ಲ ಎಂಬ ರೀತಿ ವರ್ತಿಸುತ್ತಾರೆ. ಆ ವೇಳೆ ಲೈನ್‌ಚೆಕಿಂಗ್ ಸಿಬ್ಬಂದಿ ಬಂದು ಟಿಕೆಟ್ ತಪಾಸಣೆ ಮಾಡಿದರೆ ನಿರ್ವಾಹಕರು ನಾನು ಕೇಳಿದರೂ ಕೂಡ ಟಿಕೆಟ್ ಕೊಟ್ಟಿಲ್ಲ ಎಂದು ಅವರ ಮೇಲೆ ಹಾಕಿ ಸುಮ್ಮನಾಗುತ್ತಾರೆ. ಇದಕ್ಕೆ ಅವಕಾಶಕೊಡದಂತೆ ಪ್ರಯಾಣಿಕರಿಗೆ ಅದರಲ್ಲೂ ಉಚಿತ ಟಿಕೆಟ್ ಪಡೆಯದವರಿಗೆ ದಂಡಹಾಕಿದರೆ ಮುಂದೆ ಈ ರೀತಿ ಆಗುವುದಿಲ್ಲ.

ಆದರೆ, ಅದು ಈವರೆಗೂ ಸರಿಯಾಗಿ ಆಗುತ್ತಿಲ್ಲ. ಇನ್ನಾದರೂ ಇದು ಬದಲಾಗಬೇಕು. ಟಿಕೆಟ್ ತೆಗೆದುಕೊಳ್ಳದವರಿಗೆ ಅದರಲ್ಲೂ ಈ ಮೊದಲೇ ಹೇಳಿದಂತೆ ಉಚಿತ ಟಿಕೆಟ್ ಪಡೆಯುವುದಕ್ಕೂ ಮುಂದಾಗದೆ ಉದ್ಧಟತನ ತೋರುವ ಮಹಿಳೆಯರಿಗೆ ದಂಡ ಹಾಕಲೇಬೇಕು. ಆ ರೀತಿಯ ನಿಯಮ ಜಾರಿಯಾಗದ ಹೊರತು ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ, ಗಲಾಟೆ ಮಾಡುವುದು ತಪ್ಪುವುದಿಲ್ಲ.
ಇಷ್ಟೆಲ್ಲ ಏಕೆ ವಿವರಣೆ ಕೊಟ್ಟಿದ್ದೇವೆ ಎಂದರೆ ಮಹಿಳಾ ಪ್ರಯಾಣಿಕರೊಬ್ಬರು ನಾನು ಕೇಳಿದ ಸ್ಥಳಕ್ಕೆ ಟಿಕೆಟ್ ಕೊಡದೆ ಬೇರೊಂದು ಸ್ಥಳಕ್ಕೆ ಟಿಕೆಟ್ ಕೊಟ್ಟರು. ಆ ಸ್ಥಳ ಬಂದ ಕೂಡಲೇ ನನಗೆ ಬಸ್‌ನಿಂದ ಇಳಿಯಲು ನಿರ್ವಾಹಕರು ಹೇಳಿದರು. ಆದರೆ ನಾನು ಮತ್ತೊಂದು ಟಿಕೆಟ್ ಕೊಡಿ ಎಂದು ಕೇಳಿದರೂ ಕೊಡಲಿಲ್ಲ ಎಂದು ಮೊನ್ನೆ ಅ.11ರಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಆದರೆ, ಇಲ್ಲಿ ನೂರಾರು ಪ್ರಯಾಣಿಕರಿಗೆ ಟಿಕೆಟ್ ವಿತರಿಸುವ ಒಬ್ಬ ನಿರ್ವಾಹಕರು ಈ ರೀತಿ ಈಕೆಗೆ ಏಕೆ ಮಾಡುತ್ತಾರೆ. ಇಲ್ಲಿ ತಮ್ಮ ತಪ್ಪು ಇದ್ದರು ನಿರ್ವಾಹಕರ ಮೇಲೆ ಹಾಕಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಇವರು ಟಿಕೆಟ್ ಕೇಳಿ ಸರಿಯಾದ ಸ್ಥಳ ಹೇಳಿದರೂ ಆ ನಿರ್ವಾಹಕರು ಇವರಿಗೆ ಏಕೆ ಬೇರೊಂದು ಸ್ಥಳದ ಟಿಕೆಟ್ ಕೊಡುತ್ತಾರೆ? ಹೋಗಲಿ ಗಾಬರಿಯಲ್ಲಿ ನಿರ್ವಾಹಕರು ಕೊಟ್ಟಿರಬಹುದು ಅಂತ ಅಂದುಕೊಂಡರು ಅದನ್ನು ನೋಡಿ ನನಗೆ ಈ ಸ್ಥಳದ ಟಿಕೆಟ್ ಅಲ್ಲ ಬೇಕಿರುವ ಈ ಸ್ಥಳದ್ದು ಎಂದು ಹೇಳಿ ಮತ್ತೊಂದು ಟಿಕೆಟ್‌ಅನ್ನು ಪಡೆದುಕೊಳ್ಳಬೇಕಿತ್ತಲ್ಲ. ಅದನ್ನು ಮಾಡದೆ ತಾವು ಇಳಿಯುವ ಸ್ಥಳ ಬಂದಮೇಲೆ ಇಳಿಯಿರಿ ಎಂದರೆ ಇಲ್ಲ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು ಅಲ್ಲಿಗೆ ಟಿಕೆಟ್‌ಕೊಡಿ ಎಂದರೆ ಅದು ನಿಯಮ ಬಾಹಿರವಾಗುವುದಿಲ್ಲವೇ? ಇನ್ನಾದರೂ ಈ ಬಗ್ಗೆ ತಿಳಿದುಕೊಂಡು ಪ್ರಯಾಣಿಸುವುದು ಒಳ್ಳೆಯದು.
Related
