ನ್ಯೂಡೆಲ್ಲಿ/ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಪ್ರಚಂಡ ವಿಜಯ ಸಾಧಿಸಿದ್ದು, ಬಿಹಾರದಲ್ಲಿ ಕಟ್ಟಾ ಸರ್ಕಾರ್ (ಬಂದೂಕು ಹಿಡಿದ ಸರ್ಕಾರ) ಇನ್ನೆಂದಿಗೂ ಬರೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿಜಯೋತ್ಸವ ಭಾಷಣದಲ್ಲಿ ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಷಷ್ಠಿ ದೇವತೆ ಛಠಿ ಮೈಯಾ ನೆನೆಯುತ್ತಾ ಮಾತನಾಡಿದರು. ನಾನು ಚುನಾವಣೆ ವೇಳೆ ʻಜಂಗಲ್ ರಾಜ್ʼ ಮತ್ತು ʻಕಟ್ಟಾ ಸರ್ಕಾರ್ʼ ಬಗ್ಗೆ ಮಾತನಾಡಿದಾಗೆಲ್ಲ ಆರ್‌ಜೆಡಿಯಿಂದ ಯಾವುದೇ ವಿರೋಧ ಕೇಳಿಬರುತ್ತಿರಲಿಲ್ಲ. ಆದ್ರೆ ಕಾಂಗ್ರೆಸ್‌ಗೆ ಮಾತ್ರ ನೋವುಂಟಾಗಿತ್ತು. ನಾನು ಮತ್ತೆ ಹೇಳುವೆ ಬಿಹಾರದಲ್ಲಿ ʻಕಟ್ಟಾ ಸರ್ಕಾರ್ʼ ಇನ್ನೆಂದಿಗೂ ಬರಲ್ಲ ಎಂದರು.
ʻಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್ʼ: ನಾವು ಜನರ ಸೇವಕರು, ನಮ್ಮ ಕಠಿಣ ಪರಿಶ್ರಮದಿಂದ ಜನರನ್ನು ಸಂತೋಷಪಡಿಸುತ್ತಲೇ ಇರುತ್ತೇವೆ. ಲಕ್ಷಾಂತರ ಜನರ ಹೃದಯ ಕದ್ದಿದ್ದೇವೆ. ಅದಕ್ಕಾಗಿಯೇ ಇಡಿ ಬಿಹಾರ ʻಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್ʼ (ಮತ್ತೊಮ್ಮೆ ಎನ್‌ಡಿಎ ಸರ್ಕಾರ) ಅಂತ ಹೇಳಿದೆ.
ಎನ್‌ಡಿಎಗೆ ಪ್ರಚಂಡ ಗೆಲುವು ನೀಡಬೇಕು ಅಂತ ಬಿಹಾರದ ಜನರನ್ನು ಕೇಳಿಕೊಂಡಿದ್ದೆ, ನನ್ನ ಒಂದು ಕೂಗಿಗೆ ಅವರು ಕಿವಿಗೊಟ್ಟಿದ್ದಾರೆ. 2010 ರಿಂದ ಈಚೆಗೆ ಮೈತ್ರಿಕೂಟಕ್ಕೆ ಅತಿದೊಡ್ಡ ಅಂತರದ ಗೆಲುವು ನೀಡಿದ್ದಾರೆ. ಅದಕ್ಕಾಗಿ ಇಡೀ ಎನ್‌ಡಿಎ ಕುಟುಂಬದ ಪರವಾಗಿ, ನಾನು ಬಿಹಾರದ ಎಲ್ಲ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಭಾವುಕರಾದರು.
ಚುನಾವಣಾ ಆಯೋಗದ ಪರ ಮೋದಿ ಬ್ಯಾಟಿಂಗ್: ಈ ಚುನಾವಣೆಯು ಭಾರತೀಯ ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಏಕೆಂದ್ರೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಅವಕಾಶ ವಂಚಿತರು, ಶೋಷಿತರಿಂದಲೂ ಮತದಾನ ಪ್ರಮಾಣ ಹೆಚ್ಚಾಗಿರುವುದು ಚುನಾವಣಾ ಆಯೋಗದ ಗಮನಾರ್ಹ ಸಾಧನೆಯಾಗಿದೆ ಎಂದು ಹೊಗಳಿದರು.
ನಕ್ಸಲ್ ಪೀಡಿತ ಪ್ರದೇಶದಲ್ಲೂ ಶಾಂತಿಯುತ ಮತದಾನ: ಒಂದು ಕಾಲದಲ್ಲಿ ಮಾವೋವಾದಿ ಭಯೋತ್ಪಾದನೆಯಿಂದ ಪ್ರಾಬಲ್ಯ ಹೊಂದಿದ್ದ ಅದೇ ಬಿಹಾರ ಇದು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಧ್ಯಾಹ್ನ 3 ಗಂಟೆಗೆಲ್ಲ ಮತದಾನ ಕೊನೆಗೊಳ್ಳುತ್ತಿತ್ತು. ಆದರೆ ಈ ಚುನಾವಣೆಯಲ್ಲಿ, ಬಿಹಾರದ ಜನರು ಭಯವಿಲ್ಲದೇ ಉತ್ಸಾಹದಿಂದ ಮತ ಚಲಾಯಿಸಿದ್ದರು.
ʻಜಂಗಲ್ ರಾಜ್ʼ ಆಳ್ವಿಕೆ ಸಮಯದಲ್ಲಿ ಮತದಾನ ಕೇಂದ್ರಗಳಲ್ಲಿ ಹಿಂಸಾಚಾರ ಬಹಿರಂಗವಾಗಿ ನಡೆಯುತ್ತಿತ್ತು. ಮತಪೆಟ್ಟಿಗೆಗಳನ್ನು ಲೂಟಿ ಮಾಡಲಾಗುತ್ತಿತ್ತು. ಆದರಿಂದು ಅದೇ ಶಾಂತಿಯುತ ಮತದಾನ ಮಾಡುತ್ತಿದೆ, ದಾಖಲೆ ಪ್ರಮಾಣದ ಮತದಾನ ನೋಡುತ್ತಿದೆ. ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಪ್ರಕಾರವೇ ಮತ ಚಲಾಯಿಸಿದ್ದಾರೆ ಎಂದು ಮೋದಿ ಶ್ಲಾಘಿಸಿದರು.
ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಉಪಸ್ಥಿತರಿದ್ದರು.
Related










