ಬಸ್‌ನ ಮೇಲ್ಭಾಗಕ್ಕೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಮೂವರು ಕೂಲಿ ಕಾರ್ಮಿಕರು ಮೃತ, 12ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ

ಜೈಪುರ: ಇಟ್ಟಿಗೆ ಗೂಡಿಗೆ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲ್ಭಾಗಕ್ಕೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲೇ ಮೂವರು ಕಾರ್ಮಿಕರು ಮೃತಪಟ್ಟು, ಸುಮಾರು 12 ಮಂದಿಗೆ ಗಂಭೀರ ಸುಟ್ಟು ಗಾಯಗಳಿಂದ ನರಳುತ್ತಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜೈಪುರ ಗ್ರಾಮೀಣ ಜಿಲ್ಲೆಯ ಶಹಪುರ ಉಪವಿಭಾಗದ ಮನೋಹರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ.
ಟೋಡಿ ಗ್ರಾಮದ ಇಟ್ಟಿಗೆ ಗೂಡಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ 11,000 ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ಲೈನ್ ತಗುಲಿದೆ ಪರಿಣಾಮ ಈ ಅವಘಡ ಸಂಭವಿಸಿದೆ.
ಮನೋಹರಪುರದ ಹಳ್ಳಿಯೊಂದರ ಬಳಿಯ ರಸ್ತೆಯಿಂದ ಬಸ್ ಹಾದು ಹೋಗುವಾಗ ಬಸ್‌ನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳು ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಪಾಲ್ ಸಿಂಗ್ ತಿಳಿಸಿದ್ದಾರೆ.
ಬಸ್‌ನ ಮೇಲ್ಭಾಗವು ಹೈಟೆನ್ಷನ್ ಲೈನ್‌ಗೆ ತಗುಲುತ್ತಿದ್ದಂತೆ, ಜೋರಾದ ಸ್ಫೋಟದ ಸದ್ದು ಕೇಳಿಸಿದೆ. ಈ ವೇಳಡ ಗಾಬರಿಗೊಂಡ ಕಾರ್ಮಿಕರ ಕಿರುಚಾಟದ ಸದ್ದು ಕೇಳಿ ಹತ್ತಿರದ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಮನೋಹರ್‌ಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ತಕ್ಷಣವೇ ಶಹಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದ್ದಾರೆ.

Related








