ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಕೇಂದ್ರ ಸರ್ಕಾರ ರಾಜಕೀಯ ದ್ವೇಷ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸುತ್ತಾರೆ. ಆದರೆ ಇವರು ಮಾಡುತ್ತಿರುವುದು ಏನು ಎಂದು ಕೇಂದ್ರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರದಿಂದ ದ್ವೇಷ ರಾಜಕಾರಣ ಮಾಡುತ್ತಿದ್ದು, ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದರು.
ಇನ್ನು ಬಿಡದಿ ಬಳಿಯ ಕೇತಗಾನಹಳ್ಳಿ ಗ್ರಾಮದ ಭೂಮಿ ಒತ್ತುವರಿ ತೆರವಿಗೆ ಸರ್ಕಾರ ರಚಿಸಿದ್ದ ಎಸ್‌ಐಟಿಗೆ ಹೈಕೋರ್ಟ್ ತಡೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 40 ವರ್ಷಗಳ ಹಿಂದೆ ಖರೀದಿಸಿದ ಜಮೀನು. ಅದರಲ್ಲಿ ಅತಿಕ್ರಮಣವಾಗಿಲ್ಲ. ಆದರೆ ರಾಜ್ಯಸರ್ಕಾರ ರಾಜಕೀಯ ದ್ವೇಷ ಮಾಡಿಕೊಂಡು ಹೊರಟಿದೆ. ಕಾನೂನು ವ್ಯಾಪ್ತಿಯಲ್ಲಿ ನ್ಯಾಯಾಲಯದಲ್ಲಿ ತೀರ್ಮಾನವಾಗಲಿದೆ ಎಂದರು.
ನಿವೇಶನ ಕೊಡಬೇಕಾದರೆ ಕಮಿಷನ್ ನಡೆಯುತ್ತದೆ. ಇದು ನಿರಂತರವಾಗಿ ಎಲ್ಲ ಇಲಾಖೆಯಲ್ಲೂ ನಡೆಯುತ್ತಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ರೇಟ್ ಎಷ್ಟು ಫಿಕ್ಸ್ ಮಾಡಿದ್ದೀರ ಎಂದು ಕೇಳಿದ್ದಾರೆ. ಈ ವಿಚಾರ ಮಂತ್ರಿಗಳಿಗೂ ಗೊತ್ತಿದ್ದು, ಅವರವರ ಇಲಾಖೆಗಳಲ್ಲಿ ಏನೇನು ನಡೆಯುತ್ತಿದೆ ಎಂಬುದರ ಮಾಹಿತಿಯೂ ಇದೆ ಎಂದು ವಸತಿ ಇಲಾಖೆಗೆ ಸಂಬಂಧಿಸಿದ ಆಡಿಯೋ ವೈರಲ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ಹಣ ನೀಡಿದರೆ ಮಾತ್ರ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಇದನ್ನು ನಾನಾಗಲೀ, ವಿಪಕ್ಷವಾಗಲೀ ಹೇಳುತ್ತಿಲ್ಲ. ಈಗ ಹಣ ಮಾಡಿದರೆ ಮುಂದೆ ಚುನಾವಣೆ ನಡೆಸಬಹುದು ಎಂಬುದು ಇದರ ಮರ್ಮ ಇರಬೇಕು ಎಂದರು.
2028ಕ್ಕೆ ಜೆಡಿಎಸ್, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾನೇ ಬಟ್ಟೆಯನ್ನು ಹೊಲಿಸಿಕೊಡುತ್ತೇನೆಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವ್ಯಂಗ್ಯದ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಂತಹ ದಾರಿದ್ರ್ಯ ನಮಗೆ ಬಂದಿಲ್ಲ. ಈ ನಾಡಿನ ಜನತೆ ನನಗೆ ದಾರಿದ್ರ್ಯವನ್ನು ಕೊಟ್ಟಿಲ್ಲ. ದುಡ್ಡಿನ ದಾರಿದ್ರ್ಯ ಇರುವುದು ಅವರಿಗೆ. ಆ ಪಾಪದ ಹಣದಿಂದ ನಾನು ಬಟ್ಟೆ ತರಿಸಿಕೊಳ್ಳಬೇಕಾ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಬಮೂಲ್ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮುಂದೆ ಕೆಎಂಎಫ್ ಅಧ್ಯಕ್ಷರನ್ನೂ ಮಾಡಿಕೊಳ್ಳುತ್ತಾರೆ. ಸರ್ಕಾರ ಅವರದ್ದಿದೆ. ಮುಂದೆ ಸಮಯ ಬರುತ್ತದೆ. ಸೂಕ್ತ ಉತ್ತರ ಕೊಡೋಣ ಎಂದು ಹೇಳಿದರು.
Related
