ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಗೆ ರಾಜ್ಯ ಸರ್ಕಾರ ಡೆಡ್ ಲೈನ್ ವಿಧಿಸಿದ್ದು, ನಾಳೆ (ಜು.27) ಅರ್ಜಿ ಸಲ್ಲಿಸಲು ಕೊನೆಯದಿನವೆಂದು ಖುದ್ದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದ್ದಾರೆ.
ಜುಲೈ ತಿಂಗಳು ಉಚಿತವಾಗಿ 200 ಯೂನಿಟ್ ವಿದ್ಯುತ್ ಪಡೆಯಬೇಕು ಎಂದರೆ ನಾಳೆ ಅರ್ಜಿಸಲ್ಲಿಸಲೇಬೇಕು. ಒಂದು ವೇಳೆ ನಾಳೆ ಅರ್ಜಿಸಲ್ಲಿಸಿಲ್ಲ ಎಂದರೆ ಜುಲೈ ತಿಂಗಳು ಉಚಿತ ವಿದ್ಯುತ್ನೀಡಲು ಬರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಜುಲೈ ತಿಂಗಳ ವಿದ್ಯುತ್ ಬಿಲ್ ಕಟ್ಟಬಾರದು ಎಂದುಕೊಂಡಿರುವವರು ಕೂಡಲೇ ಅರ್ಜಿಸಲ್ಲಿಸಲೇ ಬೇಕಿದೆ. ಇಲ್ಲ ನಾವು ಮುಂದಿನ ತಿಂಗಳ ಸಲ್ಲಿಸುತ್ತೇವೆ ಎಂದರೆ, ನಿಮಗೆ ಅರ್ಜಿ ಸಲ್ಲಿಸಿದ ತಿಂಗಳಿಂದ ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ವಿಧಾನಸಭೆಯಲ್ಲಿ ಇದೇ ಜು.13ರಂದು ನಡೆದಿದ್ದ ಚರ್ಚೆ ಸಂದರ್ಭದಲ್ಲಿ ವಿಪಕ್ಷದವರು ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿ ಆಗಿರುವ ಗೊಂದಲಗಳ ಬಗ್ಗೆ ಮಾತನಾಡಿದ್ದರು. ಆ ಸಂದರ್ಭದಲ್ಲಿ ಉತ್ತರ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಲು ಈ ಮೊದಲು ಕಡೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಈಗ, ಕಡೆಯ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದೇವೆ. ಅದರಂತೆ, ಜು. 27ರಂದು ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ ಎಂದು ತಿಳಿಸಿದ್ದರು.
ಅರ್ಜಿ ಹಾಕದವರಿಗೆ ಫ್ರೀ ಇಲ್ಲ, ಹೇಗೆ ಫ್ರೀ ಕೊಡೋದು?: ಜೂ. 27ರಂದು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಆನಂತರ 2 ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸುತ್ತೇವೆ. ಪ್ರತಿ ಜಿಲ್ಲೆ, ತಾಲೂಕುಗಳಲ್ಲಿನ ಆಯಾ ಪ್ರಾಂತ್ಯದ ವಿದ್ಯುತ್ ಕಚೇರಿಗಳಲ್ಲಿ ವಿದ್ಯುತ್ ಅದಾಲತ್ ನಡೆಸುತ್ತೇವೆ. ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸದವರಿಗಾಗಿ ಆ ಅದಾಲತ್ ನಡೆಯುತ್ತದೆ. ಅಲ್ಲಿ ಅರ್ಜಿ ಸಲ್ಲಿಕೆಗೆ ಆಗಿರುವ ತೊಂದರೆಗಳನ್ನು ಗಮನಿಸಿ, ಅರ್ಹರ ಅರ್ಜಿಗಳನ್ನು ಸ್ವೀಕರಿಸಿ ಅವರನ್ನು ಯೋಜನೆಯ ವ್ಯಾಪ್ತಿಯೊಳಗೆ ತರುತ್ತೇವೆ ಎಂದು ಹೇಳಿದ್ದಾರೆ.
ಆಗಸ್ಟ್ ನಲ್ಲಿ ಬಿಲ್ ಕಟ್ಟೋಹಾಗಿಲ್ಲ: 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುವ ಎಲ್ಲರಿಗೂ ನಾವು ಉಚಿತ ವಿದ್ಯುತ್ ನೀಡುತ್ತೇವೆ. ಇದರಲ್ಲಿ ಮಾತು ತಪ್ಪುವ ಪ್ರಮೆಯವೇ ಇಲ್ಲ. ಜುಲೈನಲ್ಲಿ ಬಳಸಲಾಗಿರುವ ವಿದ್ಯುತ್ ಬಿಲ್ ಆಗಸ್ಟ್ ನಲ್ಲಿ ಬರುತ್ತದೆ. 200 ಯೂನಿಟ್ ಗಿಂತ ಕೆಳಗೆ ವಿದ್ಯುತ್ ಬಳಸಿರುವವರು ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ ಎಂದು ತಿಳಿಸಿದ್ದಾರೆ.