ಚಿಕ್ಕಮಗಳೂರು: ಬಿಸಿಲಿನ ತಾಪದಿಂದ ಬಸವಳಿದಿದ್ದ ರಾಜ್ಯದ ಜನತೆಗೆ ವರುಣ ಕೃಪೆ ತೋರಿದ್ದು, ಕಳೆದ ಒಂದುವಾರದಿಂದಲೂ ರಾಜ್ಯದ ಹಲವೆಡೆ ಮಳೆಯಾಗುತ್ತಲೇ ಇದೆ. ಇದರಿಂದ ರಾಜ್ಯದ ಜನ ಸ್ವಲ್ಪಮಟ್ಟಿಗೆ ಸೂರ್ಯನ ಶಾಖದಿಂದ ಹೊರಬಂದಿದ್ದಾರೆ.
ಇನ್ನು ಹವಾಮಾನ ಇಲಾಖೆ ಮೇ 18ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಅಲ್ಲದೆ ಹವಾಮಾನ ತಜ್ಞರು ಮಾಹಿತಿ ನೀಡಿದ್ದು, ಮುಂದಿನ ಐದು ದಿನಗಳ ಕಾಲ ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗುಡುಗು, ಮಿಂಚು ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಇಂದು ಮಂಗಳವಾರ ಕೂಡ ಉತ್ತರ ಒಳನಾಡು ಹಾಗೂ ಕರಾವಳಿ ಕಡೆಗಳಲ್ಲಿ ಮಾತ್ರವಲ್ಲದೆ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಸೋಮವಾರ ಮಂಡ್ಯದಲ್ಲಿ 9 ಸೆಂ.ಮೀ, ಬೆಳಗಾವಿಯಲ್ಲಿ 6 ಸೆಂ.ಮೀ, ಮೈಸೂರಿನಲ್ಲಿ 5 ಸೆಂ.ಮೀ ಮಳೆಯಾಗಿತ್ತು.
ಮೇ 14ರಿಂದ 18ರವರೆಗೂ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಸಾಧರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಮೇತ ಭಾರೀ ಮಳೆಯಾಗುವ ಸಂಭವ ಹೆಚ್ಚಿದ್ದು, ಜನರು ಜಾಗರೂಕರಾಗಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಗೆ ನೀಡಿದೆ.
ಇನ್ನು ಚಿಕ್ಕಮಗಳೂರಲ್ಲಿ ಕಳೆದ ಒಂದು ಗಂಟೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಶೃಂಗೇರಿ ಪಟ್ಟಣ ಸೇರಿದಂತೆ ಸುತ್ತಮುತ್ತ ಜೋರು ಮಳೆಯಾಗುತ್ತಿದೆ. ಮಳೆಯಿಂದ ಪ್ರವಾಸಿಗರು ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ಪೂರ್ವ ಮುಂಗಾರು ಮಳೆ ಚುರುಕಾಗಿರುವುದರಿಂದ ರೈತರು ಹಾಗೂ ಕೃಷಿಕರಲ್ಲಿ ಸಂತಸ ಮನೆ ಮಾಡಿದೆ. ಸತತ ಮಳೆಯಾದರೇ ತುಂಗಾ ನದಿ ಹರಿವು ಕೊಂಚ ಏರಿಕೆಯಾಗೋ ಸಾಧ್ಯತೆ ಇದೆ. ಇತ್ತ ಉಡುಪಿಯಲ್ಲೂ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ.
ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂಬ ಮಾಹಿತಿ ಇದ್ದು, ಹೀಗಾಗಿ ಸಿಲಿಕಾನ್ ಸಿಟಿ ಮಂದಿ ಮನೆಯಿಂದ ಹೊರಬರುವ ಮುನ್ನ ಕೊಡೆ, ರೈನ್ ಕೋಟ್ ಅನ್ನು ಬ್ಯಾಗ್ನಲ್ಲಿ ಇಟ್ಟುಕೊಂಡರೆ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು. ಜತೆಗೆ ಸಂಜೆಯಾಗುತ್ತಿದ್ದಂತೆ ಸಿಟಿಗೆ ಎಂಟ್ರಿ ಕೊಡುವ ವರುಣನ ಜತೆ ಜತೆಗೆ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದಕ್ಕೆ ಅನುಕೂಲವಾಗಲಿದೆ.