NEWSನಮ್ಮಜಿಲ್ಲೆನಮ್ಮರಾಜ್ಯ

ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ ಬಿಟ್ಟು ಮುಷ್ಕರಕ್ಕೆ ಹೋದರೆ ನಮ್ಮನ್ನು ಅಮಾನತು, ವಜಾ, ವರ್ಗಾವಣೆ ಹಾಗೂ ಪೊಲೀಸ್‌ ಕೇಸ್‌ ಹಾಕುತ್ತಾರೆ ನಮ್ಮ ಅಧಿಕಾರಿಗಳೇ. ಹೀಗಿರುವಾಗ ನಾವು ಏನು ಮಾಡುವುದು?

ಇದಕ್ಕೆ ಆ.5ರಿಂದ ಅನಿರ್ದಿಷ್ಟಾವಧಿಗೆ ಕರೆ ಕೊಟ್ಟಿರುವ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನಮಗೆ ಭರವಸೆ ಕೊಡಬೇಕು. ಮುಷ್ಕರದಲ್ಲಿ ಭಾಗಿಯಾದ ಯಾವುದೇ ಒಬ್ಬ ನೌಕರನ ವಿರುದ್ಧ ನಿಗಮದ ಅಧಿಕಾರಿಗಳು ಕ್ರಮಕ್ಕೆ ಮುಂದಾದರೆ ನಾವು ಅದನ್ನು ಸಹಿಸುವುದಿಲ್ಲ. ಜತೆಗೆ ನೌಕರನ ವಿರುದ್ಧ ಜರುಗಿಸಿರುವ ಕ್ರಮವನ್ನು ವಾಪಸ್‌ ಪಡೆಯುವವರೆಗೂ ನಾವು ಹೋರಾಟ ಕೈ ಬಿಡುವುದಿಲ್ಲ ಅಂತ ಭರವಸೆಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇನ್ನು ಡಿಪೋಗಳಲ್ಲಿ ಬಸ್‌ ತೆಗೆದಯುವುದಿಲ್ಲ ನಾವು ಮುಷ್ಕರಕ್ಕೆ ಹೋಗುತ್ತೇವೆ ಎಂದು ಹೇಳದಿದ್ದರೂ ನಾವು ಮನೆಯಲ್ಲಿದ್ದರೂ ಅಧಿಕಾರಿಗಳು ನಮ್ಮ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾರೆ. ಆರೀತಿ ಯಾವುದೇ ಕ್ರಮ ತೆಗೆದುಕೊಳ್ಳದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಅಭಯ ನೀಡಿದರೆ ಮುಷ್ಕರಕ್ಕೆ ನಮ್ಮ ಬೆಂಬಲ ಇದೆ ಎಂದು ನೌಕರರು ಹೇಳುತ್ತಿದ್ದಾರೆ.

ಇಲ್ಲ ಅಧಿಕಾರಿಗಳು ನಮಗೆ ಮೌಖಿಕವಾಗಿಯಾದರೂ ನೀವು ಮುಷ್ಕರಕ್ಕೆ ಬೆಂಬಲ ನೀಡಿ ನಾವು ನಿಮ್ಮ ಜತೆಗಿರುತ್ತೇವೆ ಎಂದು ಹೇಳಬೇಕು. ಆ ಬಳಿಕ ನಾವು ಮುಷ್ಕರದಲ್ಲಿ ಭಾಗವಹಿಸಬಹುದು ಎಂದು ಹೇಳುತ್ತಿದ್ದಾರೆ.

ಈ ನಡುವೆ ಇತ್ತ ಅಧಿಕಾರಿಗಳು ಮುಷ್ಕರಕ್ಕೆ ಬರುವ ನೌಕರರ ವಿರುದ್ಧ ಕ್ರಮಕ್ಕೆ ಮುಂದಾದರೆ ನಾವು ಕಾನೂನು ಹೋರಾಟ ಮಾಡಲು ಈಗಾಗಲೇ ಸಿದ್ಧರಾಗಿದ್ದೇವೆ ಎಂದು ಜಂಟಿ ಕ್ರಿಯ ಸಮಿತಿಯ ಪದಾಧಿಕಾರಿಗಳು ನೌಕರರಿಗೆ ಭರವಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಆದರೆ, ನೌಕರರ ವಿರುದ್ಧ ಕಳೆದ 2021ರಲ್ಲಿ ಅಧಿಕಾರಿಗಳು ವಜಾ, ಅಮಾನತು, ವರ್ಗಾವಣೆ ಹಾಗೂ ಪೊಲೀಸ್‌ ಕೇಸ್‌ ಹಾಕಿ ಕೊಟ್ಟಿರುವ ಕಿರುಕುಳದಿಂದ ಈಗಾಗಲೇ ತುಂಬ ನೊಂದಿದ್ದು ನಮಗೆ ಇವರ ಭಾಷಣದ ಮೇಲೆ ಯಾವುದೇ ನಂಬಿಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದರ ಜತೆಗೆ ಆ.2ರಂದು ಕಾರ್ಮಿಕ ಇಲಾಖೆ ಆಯುಕ್ತರ ಮಧ್ಯಸ್ತಿಕೆಲ್ಲಿ ನಡೆಯುವ ಸಭೆಯ ಬಳಿಕ ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಕೆಲ ನೌಕರರು ಯಾವುದೇ ನಿರ್ಧಾರಕ್ಕೂ ಬಂದಿಲ್ಲ.

ಈ ನಡುವೆ ಬಿಎಂಟಿಸಿಯ ಬಹುತೇಕ ಅಧಿಕಾರಿಗಳ ಹೊರತು ಪಡಿಸಿ ಉಳಿದ ಮೂರು ಸಾರಿಗೆ ನಿಗಮಗಳ ಅಧಿಕಾರಿಗಳು ಕೂಡ ಇದೇ ಕಾದು ನೋಡುವ ತಂತ್ರವನ್ನು ಅನುಸರಿಸಿದ್ದಾರೆ. ಹೀಗಾಗಿ ನೌಕರರು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಕೊಡಬೇಕೋ ಬೇಡವೋ ಎಂಬ ಗೊಂದಲದ ಸ್ಥಿತಿಯಲ್ಲಿದ್ದಾರೆ.

ಆದರೆ, ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮಾತ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಆ.5ರಿಂದ 100ಕ್ಕೆ 100ರಷ್ಟು ಮುಷ್ಕರ ಮಾಡಿಯೇ ತೀರುತ್ತೇವೆ. ಇದಕ್ಕೆ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು ಹಾಗೂ ನೌಕರರ ಸಂಪೂರ್ಣ ಬೆಂಬಲವಿದೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ.

Megha
the authorMegha

Leave a Reply

error: Content is protected !!