
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರು ಶುಕ್ರವಾರ ಮಂಡಿಸಿದ ಮುಖ್ಯಮಂತ್ರಿಗಳ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವು ಈಡೇರಲೇ ಇಲ್ಲ. ಹೀಗಾಗಿ ಸಾರಿಗೆ ನೌಕರರು ಭಾರಿ ನಿರಾಸೆಗೊಂಡಿದ್ದಾರೆ.
ಪ್ರಸ್ತುತ ಸರ್ಕಾರ ಹಾಗೂ ಸಾರಿಗೆ ನೌಕರರ ಪರಿಸ್ಥಿತಿ ನಾ ಕೊಡೆ, ನೀ ಬಿಡೇ ಎನ್ನುವಂತಾಗಿದೆ. ಸಾರಿಗೆ ನೌಕರರ ಭರವಸೆಗಳು ಐದು ವರ್ಷಗಳಾದರೂ ಈವರೆಗೂ ಈಡೇರಿಲ್ಲ. ಶಕ್ತಿ ಯೋಜನೆಯ ಎಫೆಕ್ಟ್‌ನಿಂದಾಗಿ ಸಾರಿಗೆ ನೌಕರರ ಕೆಲಸ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗಳು ಮಾತ್ರ ಈಡೇರಿಲ್ಲ.
ಇನ್ನು ಸರ್ಕಾರ ನೌಕರರ ಬಗ್ಗೆ ಒಂದು ರೀತಿ ತಾತ್ಸಾರ ಮನೋಭಾವ ತಳೆದಿರುವುದರಿಂದ ಅಧಿಕಾರಿಗಳು/ನೌಕರರ ತಾಳ್ಮೆಕಟ್ಟೆಯೂ ಒಡೆಯುವ ಹಂತ ತಲುಪಿದೆ. ಈಗಾಗಿ ಮಾರ್ಚ್ 22ರೊಳಗೆ ಸರ್ಕಾರಿ ನೌಕರರಂತೆ ನಮಗೂ ವೇತನ ಆಯೋಗ ಮಾದರಿಯಲೇ ಸಂಬಳ ಕೊಡುತ್ತೇವೆ ಎಂದು ಘೋಷಣೆ ಮಾಡಬೇಕು ಇಲ್ಲದಿದ್ದರೆ ಮಾ.25ರ ನಂತರ ಮುಷ್ಕರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿಸಮಾನ ವೇತನ ನೀಡಬೇಕು. 7ನೇ ವೇತನ ಆಯೋಗ ಜಾರಿ ಆಗಬೇಕು. 38 ತಿಂಗಳ ವೇತನ ಹಿಂಬಾಕಿ ನೀಡಬೇಕು. 2021ರ ವೇಳೆ ಮುಷ್ಕರದಲ್ಲಿ ವಜಾಗೊಂಡ ನೌಕರರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪ್ರಮುಖ ಬೇಡಿಕೆಗಳನ್ನು ನೌಕರರ ಒಕ್ಕೂಟ ಇಟ್ಟಿದೆ.
ಈ ನಡುವೆ ಅಧಿಕಾರಿಗಳು ಹೋರಾಟಕ್ಕೆ ಬಂದರೆ ಮಾತ್ರ ನಾವು ಮುಷ್ಕರಕ್ಕೆ ಮುಂದಾಗುತ್ತೇವೆ ಇಲ್ಲದಿದ್ದರೆ ಅಧಿಕಾರಿಗಳಿಗೆ ಆದಂತೆಯೇ ನಮಗೂ ಆಗಲಿ ಬಿಡಿ. ಅವರು ಹೋರಾಟ ಮಾಡದೆ ನಮ್ಮ ಹೋರಾಟದ ಫಲವನ್ನು ಪಡೆಯುತ್ತಾರೆ. ಆದರೆ ನಾವು ಹೋರಾಟ ಮಾಡಿ ಮುಂಚೂಣಿಯಲ್ಲಿ ಗುರುತಿಸಿಕೊಂಡರೆ ನಮ್ಮನೇ ವಜಾ, ಅಮಾನತು ಮಾಡಿ ಇದೇ ಅಧಿಕಾರಿ ವರ್ಗ ಇನ್ನಿಲ್ಲದಂತ ಕಿರುಕುಳ ಕೊಡುತ್ತದೆ. ಇದು ನಮಗೇ ಬೇಕಿಲ್ಲ ಎಂದು ನೌಕರರು ಪಟ್ಟುಹಿಡಿದು ಕುಳಿತ್ತಿದ್ದಾರೆ.
ಈ ನಡುವೆ ಅಧಿಕಾರಿಗಳು ನಾವು ಯಾವುದೇ ಕಾರಣಕ್ಕೂ ಬಸ್ ನಿಲ್ಲಿಸಿ ಮುಷ್ಕರ ಮಾಡುವುದನ್ನು ಬೆಂಬಲಿಸುವುದಿಲ್ಲ ಬದಲಿಗೆ ಶಾಂತಿಯುತ ಧರಣಿ ಮಾಡಿದರೆ ಬಾಹ್ಯ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.