NEWSನಮ್ಮಜಿಲ್ಲೆನಮ್ಮರಾಜ್ಯ

ದಿಢೀರ್ ಮುಷ್ಕರಕ್ಕೆ ಸಾರಿಗೆ ನೌಕರರ ಸಿದ್ಧತೆ: ಏಕಾಏಕಿ ಸ್ತಬ್ಧಗೊಳ್ಳಲಿದೆಯೇ ಬಸ್ ಓಡಾಟ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಹಾಗೂ 2020 ಜನವರಿ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗಿರುವ ಶೇ. 15ರಷ್ಟು ಮೂಲ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡುವಲ್ಲಿ ಮೀನಮೇಷ ಎಣಿಸುತ್ತಿರುವ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಸಂಘಟನೆಗಳು ಯಾವುದೇ ಮುನ್ಸೂಚನೆ ಕೊಡದೇ ದಿಢೀರ್‌ ಮುಷ್ಕರ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಘಟಕಗಳಿಗೆ ಹಾಗೂ ವಿಭಾಗೀಯ ಕಚೇರಿಗಳಿಗೆ ಭೇಟಿ ನೀಡುವ ಕಾರ್ಯದಲ್ಲಿ ನಿರತರಾಗಿದ್ದು, ಇನ್ನು ಕೆಲವರು ದೂರವಾಣಿ ಮೂಲಕ ಸಮಸ್ತ ನೌಕರರ ಬೆಂಬಲ ನೀಡುವಂತೆ ಕರೆ ನೀಡುತ್ತಿದ್ದಾರೆ. ಹೀಗಾಗಿ ಯಾವ ಸಮಯದಲ್ಲಿ ಬೇಕಾದರೂ ಬಸ್‌ಗಳ ಓಡಾಟ ರಾಜ್ಯದಲ್ಲಿ ಸ್ತಬ್ಧವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಇನ್ನು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್‌ನಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲಾಗಿತ್ತು. ಇದೀಗ ಮತ್ತೆ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಾರಿ ದಿನಾಂಕ ಘೋಷಣೆ ಮಾಡದೆ ಏಕಾಏಕಿ ಬಸ್ ನಿಲ್ಲಿಸಲು ಒಗ್ಗಟ್ಟಿನಿಂದ ಪ್ಲಾನ್ ಮಾಡಲಾಗುತ್ತಿದೆ. ದಿಢೀರ್‌ ಮುಷ್ಕರವಾದರೆ ಪ್ರಯಾಣಿಕರು ಸಂಕಷ್ಟಕ್ಕೀಡಾಗುವ ಸಾಧ್ಯತೆಯೂ ಹೆಚ್ಚಾಗಿದೆ.

ಸಾರಿಗೆ ನೌಕರರ ಬೇಡಿಕೆಗಳ ಸಂಬಂಧ ಕಳೆದ ಶನಿವಾರ ಸಾರಿಗೆ ಸಚಿವರ ಜತೆಗೆ ಸಭೆ ನಡೆದಿತ್ತು. ಆದರೆ, ಬೇಡಿಕೆಗಳ ಈಡೇರಿಕೆ ಸಂಬಂಧ ಒಮ್ಮತಕ್ಕೆ ಬಾರದ ಹಿನ್ನೆಲೆ ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ನಾಲ್ಕು ಬಾರಿ ಸಭೆ ನಡೆಸಿ ಆಗಿದೆ. ಅಲ್ಲದೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜತೆ ಮೂರು-ನಾಲ್ಕು ಬಾರಿ ಸಭೆ ನಡೆದಿದ್ದರೂ ಸರ್ಕಾರ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮತ್ತು ವೇತನ ಹಿಂಬಾಕಿ ನೀಡಲು ಯಾವುದೇ ದೃಢ ನಿರ್ಧಾರ ತೆಗೆದುಕೊಂಡಿಲ್ಲ.

ಸರ್ಕಾರಕ್ಕೆ ಬಿಸಿ ಮುಟ್ಟಿಸಲು ದಿನಾಂಕ ತಿಳಿಸದೇ ಮುಷ್ಕರ?: ದಿನಾಂಕ ನಿಗದಿ ಮಾಡಿ ಮುಂಚಿತವಾಗಿ ಮಾಹಿತಿ ನೀಡಿದರೆ ಸರ್ಕಾರ ಮತ್ತೆ ಮುಷ್ಕರಕ್ಕೆ ಅಡ್ಡಿ ಮಾಡಬಹುದು ಎಂಬ ಖಚಿತತೆ ಸಾರಿಗೆ ನಕರರು, ಮುಖಂಡರದ್ದು. ಹೀಗಾಗಿ ಈ ಬಾರಿ ದಿನಾಂಕ ನಿಗದಿ ಮಾಡದೆ ಸಾರಿಗೆ ನೌಕರರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾರ್ಮಿಕ ಇಲಾಖೆಗೆ ಮುಷ್ಕರದ ನೋಟಿಸ್ ಕೂಡ ನೀಡದೆ ಏಕಾಏಕಿ ಬಸ್ಸುಗಳ ಸಂಚಾರ ನಿಲ್ಲಿಸಲು ಸಜ್ಜಾಗುತ್ತಿದ್ದಾರೆ.

ಇನ್ನು ಸರ್ಕಾರಕ್ಕೆ ಭಾರಿ ಪ್ರಮಾಣದಲ್ಲೇ ಬಿಸಿ ಮುಟ್ಟಿಸಲು ರಾತ್ರೋರಾತ್ರಿ ಸಾರಿಗೆ ಮುಖಂಡರು ವಾಟ್ಸಾಪ್ ಮೂಲಕ ಒಬ್ಬರಿಗೊಬ್ಬ ನೌಕರರಿಗೆ ಸಂದೇಶ ಕಳಿಸಿ ವಿಷಯ ಹಂಚಿಕೊಳ್ಳುವ ಮೂಲಕ ದಿಢೀರ್‌ ಬಸ್ ಸಂಚಾರ ನಿಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Megha
the authorMegha

Leave a Reply

error: Content is protected !!