ಬೆಂಗಳೂರು: ರಾಜ್ಯ ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿಯನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಿ ಮುಷ್ಕರದ ಹಾದಿಯನ್ನು ತಪ್ಪಿಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ಬಗ್ಗೆ ಮಾತನಾಡಿದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ” ಶಕ್ತಿ ಯೋಜನೆಗೆ ಶ್ರಮಿಸುತ್ತಿರುವ ರಾಜ್ಯ ಸಾರಿಗೆ ನಿಗಮಗಳ 1.15 ಲಕ್ಷ ನೌಕರರಿಗೆ 38 ತಿಂಗಳ ವೇತನವನ್ನು ಹಿಂಬಾಕಿ ಉಳಿಸಿಕೊಂಡಿರುವುದು ನಿಜಕ್ಕೂ ಸರ್ಕಾರವು ದಿವಾಳಿಯಾಗಿರುವ ಸಂಕೇತ.
2020ರ ಜನವರಿಯಿಂದ 2023ರ ಮಾರ್ಚ್ ವರೆಗೆ 1800 ಕೋಟಿ ರೂ. ವೇತನ ಬಾಕಿ ಇದ್ದು ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದಲ್ಲದೆ ಕೈಗಾರಿಕಾ ಒಪ್ಪಂದದ ಅನ್ವಯ ಸಾರಿಗೆ ನಿಗಮಗಳ ಅಧಿಕಾರಿ ನೌಕರರಿಗೆ 2024ರ ಜನವರಿ 1 ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಬೇಕಿತ್ತು, ಆದರೆ ಎರಡು ವರ್ಷಗಳಿಂದ ಸರ್ಕಾರ ವೇತನ ಪರಿಷ್ಕರಣೆ ಮಾಡಿಲ್ಲ.
ಸಾರಿಗೆ ನೌಕರರನ್ನು ರಾಜ್ಯದಲ್ಲಿ ಜೀತದಾಳು ಪದ್ಧತಿಯಂತೆ ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ಅಮಾನವೀಯ ಸಂಗತಿ. ಕೂಡಲೇ ಸಾರಿಗೆ ನೌಕರರು ಮುಷ್ಕರದ ಹಾದಿಯನ್ನು ಹಿಡಿದು ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಮುನ್ನವೇ ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.
ಬಡ ನೌಕರರಿಗೆ ದಕ್ಕಬೇಕಿರುವ ವೇತನ ಹಿಂಬಾಕಿಯನ್ನು ಕೂಡಲೇ ಪಾವತಿ ಮಾಡಿ ಸರ್ಕಾರವು ತಾನು ದಿವಾಳಿಯಾಗಿಲ್ಲ ಎಂಬುದನ್ನು ಸಾಬೀತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಕ್ಷವು ಕಳೆದ ಹಲವು ವರ್ಷಗಳಿಂದ ಸಾರಿಗೆ ನೌಕರರ ನೈಜ ಬೇಡಿಕೆಗಳ ಹೋರಾಟಕ್ಕೆ ಜತೆಯಾಗಿ ನಿಂತಿದೆ. ಮುಂಬರುವ ದಿವಸಗಳಲ್ಲಿಯೂ ಸಾರಿಗೆ ನೌಕರರ ಹೋರಾಟದಲ್ಲಿ ಆಮ್ ಆದ್ಮಿ ಪಕ್ಷವು ಸಹ ಕೈಜೋಡಿಸಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.
Related










