ಮೈಸೂರು: ಮೈಸೂರಿನ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಇಂದು ರಾಜ್ಯ ರೈತ ಸಂಘಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಸಮಿತಿಯಿಂದ ದೆಹಲಿಯ ರೈತರ ಹೋರಾಟದ ವೇಳೆ ಪೊಲೀಸರ ಗೋಲಿಬಾರ್‌ನಿಂದ ಮಡಿದ ರೈತರಿಗೆ ಇಂದು ಮೇಣದ ಬತ್ತಿಹಚ್ಚಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕೇಂದ್ರ ಸರ್ಕಾರ ರೈತರ ಸಮಸ್ಯೆ ನೀಗಿಸುವಂತೆ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಪೊಲೀಸ್ ದುರ್ಬಳಕೆ ಮಾಡಿ ರೈತರ ಹೋರಾಟವನ್ನು ಹತ್ತಿಕ್ಕಲು ಗೋಲಿಬಾರ್ ನಡೆಸಿ ರೈತರನ್ನು ಕಗ್ಗೊಲೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಗೋಲಿಬಾರ್‌ನಲ್ಲಿ ಪ್ರಾಣ ಕಳೆದುಕೊಂಡ ಯುವ ರೈತರ ಕುಟುಂಬಕ್ಕೆ ಪಂಜಾಬ್ ಸರ್ಕಾರ ಒಂದು ಕೋಟಿ ರೂ.ಗಳ ಪರಿಹಾರ ನೀಡಿದೆ ಹಾಗೂ ಅವರ ಕುಟುಂಬಕ್ಕೆ ಉದ್ಯೋಗ ನೀಡಲು ಭರವಸೆ ನೀಡಿದೆ.
ಆದರೆ, ಗೋಲಿಬಾರ್ ಮಾಡಿದ ಪೊಲೀಸ್ ಅಧಿಕಾರಿಯ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ರೈತರ ಹೋರಾಟವನ್ನು ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ಮುಂದೆ ಬರುವ ಚುನಾವಣೆಯಲ್ಲಿ ಹಾಲಿ ಇರುವ ಸಂಸದರನ್ನು ಸೋಲಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚರಿಸಿದರು.
ಫೆ.26ರಂದು ರಾಜ್ಯಾದ್ಯಂತ ಎಂಪಿಗಳ ಮನೆ ಕಚೇರಿಗಳ ಮುಂದೆ ಹೋರಾಟ ನಡೆಸಿ ನಿದ್ರಾವಸ್ಥೆಯಲ್ಲಿರುವ ಸಂಸದರನ್ನು ಎಚ್ಚರಿಸಲಾಗುವುದು. ಈಗಲಾದರೂ ರೈತರ ಹೋರಾಟದ ಪರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಕಚೇರಿ ಮುಂದೆ ಹೋರಾಟ ಮಾಡಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಇಂದಿನ ಶ್ರದ್ಧಾಂಜಲಿ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಬಿ ಪಿ ಪರಶಿವಮೂರ್ತಿ, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಮುಖಂಡರಾದ ವರಕೋಡು ನಾಗೇಶ್, ವಾಜಮಂಗಲ ಮಹಾದೇವ, ಕಾಟೂರು ನಾಗೇಶ್, ಕೂಡನಹಳ್ಳಿ ಸೋಮಣ್ಣ, ಕುಂತನಳ್ಳಿ ಕುಳ್ಳೇಗೌಡ, ಸಾತಗಳ್ಳಿ ಬಸವರಾಜು,
ಆದಿಬೆಟ್ಟಳ್ಳಿ ಕುಮಾರ್, ಕೇಬಲ್ ರವಿ, ಯಾಕನೂರು ಮಲ್ಲೇಶ್, ಚಂದ್ರು, ಬರಡನಪುರ ಮಹದೇವಸ್ವಾಮಿ ಇನ್ನು ಮುಂತಾದವರು ಇದ್ದರು.