CRIMENEWSನಮ್ಮಜಿಲ್ಲೆ

ಬೈಕ್‌ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಚಿಕ್ಕಬಳ್ಳಾಪುರ: ಬೈಕ್‌ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಗೆ ಹೋಗುವ ಮಾರ್ಗದ ಮಧ್ಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ಸಿಕಂದರ್ ಬಾಬಾ ಹಾಗೂ ಜನಾರ್ದನಾಚಾರಿ ಅತ್ಯಾಚಾರ ಎಸಗಿ ಈಗ ಕಂಬಿ ಹಿಂದೆ ಇರುವ ಆರೋಪಿಗಳು.

ಸದ್ಯ ಸಂತ್ರಸ್ತ ಯುವತಿಯನ್ನು ಮಹಿಳಾ ಸ್ವಾದಾರ ಕೇಂದ್ರದಲ್ಲಿ ಇರಿಸಿ ಆರೈಕೆ ಮಾಡಲಾಗುತ್ತಿದೆ. ಘಟನೆ ನಡೆದ ದಿನ ಸಂತ್ರಸ್ತ ಯುವತಿ ಕೆಲಸ ಹುಡುಕಿಕೊಂಡು ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿದ್ದರು. ಬಳಿಕ ವಾಪಸ್ ನಡೆದುಕೊಂಡು ಮಂಚೇನಹಳ್ಳಿಗೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಆರೋಪಿ ಸಿಕಂದರ್ ಬಂದು, ಡ್ರಾಪ್ ಕೊಡುವ ನೆಪದಲ್ಲಿ ಯುವತಿಯನ್ನು ಪುಸಲಾಯಿಸಿ ಬೈಕ್ ಹತ್ತಿಸಿಕೊಂಡಿದ್ದಾನೆ.

ಆ ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆನಂತರ ಚಿಕ್ಕಬಳ್ಳಾಪುರಕ್ಕೆ ಹೋಗಿ ತನ್ನ ಸ್ನೇಹಿತ ಜನಾರ್ದನ್‌ ಎಂಬಾತನನ್ನು ಅದೇ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದು ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದದ್ದಾರೆ.

ಕೃತ್ಯದ ಬಳಿಕ ಆಕೆಯ ಕಿವಿಯಲ್ಲಿದ್ದ ಬಂಗಾರದ ಓಲೆ ಕಸಿದುಕೊಂಡು, ಸಂತ್ರಸ್ತ ಯುವತಿಯನ್ನು ಸಮೀಪದ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಹೋಗಿದ್ದಾರೆ. ಇತ್ತ ಗಾಬರಿಯಿಂದ ಕೂತಿದ್ದ ಯುವತಿಯನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನನ್ವಯ ತನಿಖೆಗಿಳಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಕೆಯಿಂದ ಕಸಿದುಕೊಂಡಿದ್ದ ಕಿವಿ ಓಲೆಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement
Megha
the authorMegha

Leave a Reply

error: Content is protected !!