ಬೆಂಗಳೂರು: ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಶುಕ್ರವಾರ ಫಸ್ಟ್ ಸರ್ಕಲ್ ಸೊಸೈಟಿ ವತಿಯಿಂದ ಆರಂಭವಾದ ‘ಉದ್ಯಮಿ ಒಕ್ಕಲಿಗ’ ಸಮಾವೇಶ ಶನಿವಾರ 2ನೇ ದಿನ ಪೂರೈಸಿದ್ದು, ಇಂದು ಈ ಸಮಾವೇಶ ಒಕ್ಕಲಿಗ ಸಮುದಾಯದ ಉದ್ದಿಮೆದಾರರ ಹಾಗೂ ಗ್ರಾಹಕರ ನಡುವಿನ ಬಾಂಧವ್ಯ ಬೆಸೆದಿದೆ.
ಕರ್ನಾಟಕ-ತಮಿಳುನಾಡಿನ ಒಕ್ಕಲಿಗ ಉದ್ಯಮಿಗಳು ನಡುವಿನ ಚಿಂತನ-ಮಂಥನ ನಡೆಯಿತು. ಕೃಷಿ, ಆರೋಗ್ಯ, ಶಿಕ್ಷಣ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಗಳು, ಮನರಂಜನೆ, ನವೋದ್ಯಮ, ಆಹಾರ, ಆತಿಥ್ಯ ಸೇರಿ ಎಲ್ಲ ಕ್ಷೇತ್ರಗಳ ಬಗ್ಗೆ ವಿಸ್ತೃತ ಚರ್ಚಾಗೋಷ್ಠಿಗಳು ನಡೆದವು. ಹಲವು ತಜ್ಞರು ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಿದರು.
ನವೋದ್ಯಮ ಆರಂಭಿಸುವ ಇಚ್ಛೆ ಹೊಂದಿರುವವರು ಉದ್ಯಮದಾರರಿಂದ ಅಗತ್ಯ ಮಾಹಿತಿ ಪಡೆದರು. ಸಾವಿರಾರು ಜನರು ಮಳಿಗೆಗಳಿಗೆ ತೆರಳಿ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ, ಕಾಫಿ ಸೇರಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಮುದಾಯ ಮುಂಚೂಣಿಯಲ್ಲಿದೆ. ಆದರೆ, ಉದ್ಯೋಗ, ವ್ಯಾಪಾರ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಹಿಂದುಳಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಉದ್ದಿಮೆಗಳನ್ನು ತೆರೆಯುವಂತೆ ಸಮುದಾಯದ ಪ್ರತಿನಿಧಿಗಳನ್ನು ಹುರುದುಂಬಿಸುವ ಕಾರ್ಯವೂ ನಡೆಯಿತು.
ಬದಲಾದ ಕಾಲಘಟ್ಟದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಪರಸ್ಪರ ಪೂರಕವಾಗಿ ಜೊತೆಗೂಡಿ ಇನ್ನಷ್ಟು ಉದ್ಯಮ ಬೆಳೆಸುವ ಬಗ್ಗೆ ಸಲಹೆ ನೀಡಲಾಯಿತು. ಅಲ್ಲದೆ, ಒಕ್ಕಲಿಗರು ಕೇವಲ ಗ್ರಾಹಕರಾಗಿ ಉಳಿಯದೆ ತಮ್ಮ ಸಮುದಾಯದ ಸಾವಿರಾರು ಉತ್ಪಾದಕರು,ಮಾರಾಟಗಾರರನ್ನು ಬೆಳೆಸಬೇಕು ಎಂಬುದರ ಬಗ್ಗೆ ಬೆಳಕು ಚೆಲ್ಲಲಾಯಿತು.
ಕೃಷಿಕ ಸಲಕರಣೆಗಳ ಆಕರ್ಷಣೆ: ನೇಗಿಲ ಹಿಡಿದು ಉಳುತ್ತಿರುವ ರೈತ, ಗೌಡ್ರುಮನೆ (ಹುಲ್ಲಿನ ಮನೆ), ಅದರಲ್ಲಿ ರಾಗಿ ಬೀಸೋ ಕಲ್ಲಿನಿಂದ ಹಿಡಿದು, ರಾಗಿಮುದ್ದೆ ತೊಳೆಸುವ ಕೋಲುಗಳು, ಮಡಿಕೆಗಳು, ಲಾಟೀನ್‌ವರೆಗೆ ನಾನಾ ಪರಿಕರಗಳು ಹುಲ್ಲಿನ ಮನೆಯಲ್ಲಿ ಗಮನ ಸೆಳೆಯುತ್ತಿವೆ. ಧಾನ್ಯಗಳ ರಾಶಿಯೂ ಆಕರ್ಷಣೆವಾಗಿದೆ. ಪುರಾತನ ಶಾಸನಗಳು, ಕೆಂಪೇಗೌಡರ ಕಾಲದ ಪೇಟೆಗಳ ವಿವರ, ಅವರ ಸೊಸೆ ಲಕ್ಷ್ಮೀದೇವಿಯ ಕುರಿತಾದ ಮಾಹಿತಿ ಚಿತ್ರಗಳ ಪ್ರದರ್ಶನ ವಿಶೇಷವಾಗಿದೆ. ನಾಡಪ್ರಭು ಕೆಂಪೇಗೌಡರ ಕಲ್ಲಿನ ಕೋಟೆ ಕೂಡ ಗಮನ ಸೆಳೆಯುತ್ತಿದೆ.
ಜನಪರ ಕಾರ್ಯಗಳ ಪ್ರದರ್ಶನ: ಒಕ್ಕಲಿಗ ಸಮುದಾಯ, ಸಮಾಜಕ್ಕೆ ನೀಡಿದ ಕೊಡುಗೆ, ಗಂಗರು, ಹೊಯ್ಸಳರ ಕಾಲದ ಒಕ್ಕಲಿಗ ಸಮುದಾಯದ ಜನಪರ ಕಾರ್ಯಗಳ ಬಗ್ಗೆ ಸಮಾವೇಶದಲ್ಲಿ ಮಾಹಿತಿ ನೀಡಲು ಮಳಿಗೆ ಸ್ಥಾಪಿಸಲಾಗಿದೆ. ಔದ್ಯೋಗಿಕ ಮಟ್ಟದ ಉದ್ಯಮಿಗಳು ಮಾತ್ರವಲ್ಲದೆ, ಕೋಲಾರ, ಮಂಡ್ಯ, ಹಾಸನ ಮತ್ತಿತರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಒಕ್ಕಲಿಗರ ಆಹಾರ ಪದಾರ್ಥಗಳು ಕೂಡ ಗಮನ ಸೆಳೆಯುತ್ತಿವೆ. ರಾಗಿ ಮುದ್ದೆ-ನಾಟಿ ಕೋಳಿ ಸಾರು, ರಾಗಿ ಮುದ್ದೆ-ಬಸ್ಸಾರು, ಸೊಪ್ಪಿನ ಸಾರು, ಬಿರಿಯಾನಿ, ರಾಗಿಯ ಒತ್ತು ಶಾವಿಗೆ ಹೀಗೆ ನಾನಾ ಬಗೆಯ ಮಾಂಸಾಹಾರ ಮತ್ತು ಸಸ್ಯಾಹಾರದ ಪದಾರ್ಥಗಳು ಸಮಾವೇಶದಲ್ಲಿ ಹೆಚ್ಚಿನ ಜನರನ್ನು ಸೆಳೆಯುತ್ತಿತ್ತು.
ಭಾನುವಾರ ಸಮಾವೇಶಕ್ಕೆ ತೆರೆ: ಉದ್ಘಾಟನೆಯ ದಿನ ಶುಕ್ರವಾರ ಅಂದಾಜು 5 ಸಾವಿರ ಮಂದಿ ಆಗಮಿಸಿದ್ದರು. ಎರಡನೇ ದಿನವೂ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದರು. ಭಾನುವಾರ ರಜಾ ಹಿನ್ನೆಲೆಯಲ್ಲಿ ಹೆಚ್ಚಿನ ಮಂದಿ ಆಗಮಿಸುವ ನಿರೀಕ್ಷೆ ಇದೆ. ಒಟ್ಟು 20 ಸಾವಿರಕ್ಕೂ ಅಧಿಕ ಮಂದಿ ಸಮ್ಮೇಳನಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮೂರು ದಿನಗಳ ಸಮಾವೇಶಕ್ಕೆ ಜ.21ರ ಭಾನುವಾರ ತೆರೆಬೀಳಲಿದೆ.