CRIMENEWSಸಿನಿಪಥ

ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ: 1,65,000 ರೂ. ಎಗರಿಸಿದ ಹ್ಯಾಕರ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ ಎದುರಾಗಿದೆ.

ಪ್ರಿಯಾಂಕ ಉಪೇಂದ್ರ ಅವರು ಆನ್‌ಲೈನ್ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಡಿಜಿಟಲ್ ವಂಚಕರು ಪ್ರಿಯಾಂಕ ಅವರಿಗೆ ಕರೆಮಾಡಿ ಕೋಡ್ ನಂಬರ್ ಕಳಿಸಿದ್ದಾರೆ. ಈ ಕೋಡ್ ಡಯಲ್ ಮಾಡಿ ಎಂದು ಹೇಳಿದ್ದಾರೆ. ಡಿಜಿಟಲ್ ಧೂತರು ಹೇಳಿದಂತೆ ಮಾಡಿದ ಪ್ರಿಯಾಂಕ ಫೋನ್ ಹ್ಯಾಕ್ ಆಗಿದೆ.

ಆ ಬಳಿಕ ಪ್ರಿಯಾಂಕ ಅವರ ಫೋನ್ ನಂಬರ್ ಬಳಸಿ ವಂಚಕರು ಹಲವರಿಗೆ ಹಣವನ್ನು ಕಳುಹಿಸುವಂತೆ ಹೇಳಿದ್ದಾರೆ. ಕೆಲವರು ಅನುಮಾನಗೊಂಡು ಹಣ ಕಳುಹಿಸಿಲ್ಲ, ಇನ್ನು ಕೆಲವರು, ಆಪ್ತರು ಹಣದ ತುರ್ತಿರಬಹುದು ಎಂದು ಹಣ ವರ್ಗಾವಣೆ ಮಾಡಿದ್ದಾರೆ.

ಉಪೇಂದ್ರ ಅವರ ಮಗ ಆಯುಷ್ ಸೇರಿ ಮೂವರು ತಲಾ 55,000 ರೂ.ಗಳಂತೆ ಹಣವನ್ನು ಪ್ರಿಯಾಂಕ ಉಪೇಂದ್ರ ಅವರೇ ಎಂದುಕೊಂಡು ಕಳುಹಿಸಿ ಮೋಸ ಹೋಗಿದ್ದಾರೆ. ಒಟ್ಟು 1,65,000 ಹಣವನ್ನು ಹ್ಯಾಕರ್‌ಗಳು ಎಗರಿಸಿದ್ದಾರೆ.

ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರ ಕುಟುಂಬಕ್ಕೆ ಡಿಜಿಟಲ್ ಧೂತರು ಬೆಳಗ್ಗೆ ಬೆಳಗ್ಗೆನೇ ಸಂಕಷ್ಟ ತಂದೊಡ್ಡಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ ಉಪೇಂದ್ರ ದಂಪತಿ ದೂರು ದಾಖಲಿಸಿದ್ದಾರೆ.

ಇನ್ನು ದೂರು ದಾಖಲಿಸಿಕೊಂಡ ಪೊಲೀಸರು ಹಣ ಎಗರಿಸಿದ ಕಿರಾತಕರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ರೀತಿಯ ಪರಿಚಿತರಿಂದ ಸಂದೇಶಗಳು, ಫೋನ್‌ಕಾಲ್‌ಗಳು ಬಂದಾಗ ಎಚ್ಚರಿಕೆ ವಹಿಸಿ ಎಂದು ಸಂದೇಶ ನೀಡಿದ್ದಾರೆ ಉಪೇಂದ್ರ ದಂಪತಿ.

Megha
the authorMegha

Leave a Reply

error: Content is protected !!