Search By Date & Category

NEWSಆರೋಗ್ಯನಮ್ಮಜಿಲ್ಲೆ

ಸೆ.26ರಿಂದ ಜಾನುವಾರುಗಳಿಗೆ 4ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಒಟ್ಟು 1,62,980 ದನ ಮತ್ತು ಎಮ್ಮೆಗಳಿದ್ದು, ಈ ಎಲ್ಲ ಜಾನುವಾರುಗಳಿಗೆ 26.09.2023 ರಿಂದ 25.10.2023 ರವರೆಗೆ 4ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಬಮೂಲ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಒಟ್ಟು 65 ತಂಡಗಳಲ್ಲಿ 276 ಲಸಿಕೆದಾರರು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ನಿಗದಿತ ವೇಳಾಪಟ್ಟಿಯಂತೆ ಗ್ರಾಮಗಳಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡಲಿದ್ದಾರೆ.

ಈಗಾಗಲೇ ಪ್ರತೀ ಗ್ರಾಮವಾರು ಮೈಕ್ರೋಪ್ಲಾನ್ ಮಾಡಲಾಗಿದ್ದು, ಅದರನ್ವಯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಮತ್ತು ಈ ಲಸಿಕಾ ಕಾರ್ಯಕ್ರಮದ ಕುರಿತು ರೈತರಿಗೆ ಮನವರಿಕೆ ಮಾಡಿ ಕೊಡುವ ಸಲುವಾಗಿ ಫ್ಲೆಕ್ಸ್ ಬ್ಯಾನರ್, ಪೋಸ್ಟರ್ ಮತ್ತು ಕರಪತ್ರಗಳನ್ನು ಮುದ್ರಿಸಿ ಜಿಲ್ಲೆಯ ಪ್ರತಿ ಪಶುವೈದ್ಯಕೀಯ ಸಂಸ್ಥೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಆವರಣದಲ್ಲಿ ಪ್ರದರ್ಶಿಸಲಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 1,87,700 ಡೋಸಸ್‌ ಕಾಲುಬಾಯಿ ರೋಗ ಲಸಿಕೆ ಹಾಗೂ 1,67,000 ಸಿರಿಂಜ್‌ಗಳು ಸರಬರಾಜಾಗಿವೆ. ಬಮೂಲ್ ವತಿಯಿಂದ ಈ ಲಸಿಕಾ ಕಾರ್ಯಕ್ರಮಕ್ಕೆ ಒಟ್ಟು 36 ವಾಹನಗಳನ್ನು ಹಾಗೂ 51 ಲಸಿಕೆದಾರರನ್ನು ಒದಗಿಸಲಾಗುತ್ತಿದೆ.

ಪ್ರತಿ ರಾಸಿಗೆ 01 ರಂತೆ ಸಿರಿಂಜ್ ಮತ್ತು ನೀಡಲ್‌ಗಳನ್ನು ಬಳಸಿ ಲಸಿಕೆ ಹಾಕಲಾಗುವುದು. ಆದ ಪ್ರಯುಕ್ತ ಎಲ್ಲಾ ರೈತ ಬಾಂಧವರು 03 ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸುವಂತೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Leave a Reply

error: Content is protected !!