ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದ ಹಿರಿಯ ಸಾಹಿತಿ ಬಾನು ಮುಷ್ತಾಕ್


ಮೈಸೂರು: ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಇಂದು ಚಾಲನೆ ಸಿಕ್ಕಿದೆ. ನಾಡಿನ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟಿಸಿದರು.
ಸೋಮವಾರ ಬೆಳಗ್ಗೆ ವೃಶ್ಚಿಕ ಶುಭ ಲಗ್ನದಲ್ಲಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ‘ಮೈಸೂರು ದಸರಾ’ಗೆ ಚಾಲನೆ ನೀಡಿದರು. ಉದ್ಘಾಟನೆಗೂ ಮುನ್ನ, ಬಾನು ಮುಷ್ತಾಕ್ ಅವರು ಕುಟುಂಬ ಸಮೇತ ಚಾಮುಂಡಿ ಸನ್ನಿಧಿಗೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ವಿಶೇಷ ಅಂದರೆ ಬಾನು ಮುಷ್ತಾಕ್ ಅವರು ಕೇಸರಿ ಬಣ್ಣದ ಸೀರೆ, ಹಸಿರು ಬಣ್ಣದ ರವಿಕೆ, ತಲೆಯಲ್ಲಿ ಮಲ್ಲಿಗೆ ಹೂ ಮೂಡಿದು ಬಂದಿದ್ದರು. ಚಾಮುಂಡಿತಾಯಿ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿದ ಮುಷ್ತಾಕ್ ಅವರನ್ನು ಅಭಿನಂದಿಸಲಾಯಿತು.
ಇನ್ನು ಬಿಜೆಪಿ ನಾಯಕರ ಹೇಳಿಕೆಗೆ ಬಾನು ಮುಷ್ತಾಕ್ ಸೆಡ್ಡು ಹೊಡೆದರು. ದಸರಾ ಉದ್ಘಾಟನೆಗೆ ಬಾನು ಅವರ ಆಯ್ಕೆಯನ್ನು ಬಿಜೆಪಿ ಪ್ರಶ್ನೆ ಮಾಡಿತ್ತು. ಅಲ್ಲದೇ ಚಾಮುಂಡಿ ಸನ್ನಿಧಿಗೆ ಹೋಗುವ ಅವರು ಮಂಗಳಾರತಿ ತಗೋತಾರ? ಕೈಮುಗಿತಾರ ಅಂತಾ ಬಿಜೆಪಿ ಹೇಳಿತ್ತು. ಆದರೆ ಮುಷ್ತಾಕ್ ಅವರು ಚಾಮುಂಡೇಶ್ವರಿಗೆ ಕೈಮುಗಿದು, ಮಂಗಳಾರತಿ ತೆಗೆದುಕೊಂಡು ಭಾವುಕರಾದರು.
ದಸರಾ ಉದ್ಘಾಟಿಸಿ ಮಾತನಾಡಿದ ಬಾನು ಅವರು, ಪ್ರೀತಿಯ ಸಮಾಜ ಕಟ್ಟೋಣ, ಎಲ್ಲರಿಗೂ ಸಮಪಾಲು ಸಮಬಾಳು ಇರಲಿ. ನಾನು ನೂರಾರು ದೀಪಗಳನ್ನು ಬೆಳಗಿದ್ದೇನೆ. ಇವತ್ತು ಪುಷ್ಪಾರ್ಚನೆ ಮಾಡಿದೇನೆ ಎಂದರು.
ಅಲ್ಲದೆ ಮಂಗಳಾರತಿ ಸ್ವೀಕರಿಸಿದ್ದೇನೆ. ನನ್ನ ಹಿಂದೂ ಧರ್ಮದ ಸಂಬಂಧ ನನ್ನ ಆತ್ಮಕಥೆಯಲ್ಲಿ ಬರೆದಿದ್ದೇನೆ. ಅದು ನಾಳೆ ಪ್ರಕಟ ಆಗಲಿದೆ. ಎಷ್ಟೇ ಸವಾಲು ಬಂದ್ರೂ ದಿಟ್ಟವಾಗಿ ಆಹ್ವಾನ ನೀಡಿ ನೈತಿಕ ಬೆಂಬಲ ಕೊಟ್ಟ ಸಿಎಂ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಎಂದರು.

Related
