CRIMENEWSನಮ್ಮಜಿಲ್ಲೆ

ವಿರಾಜಪೇಟೆ: ಬಾಲಕಿ ಮೇಲೆ ದೌರ್ಜನ್ಯ- 70 ವರ್ಷದ ವೃದ್ಧನಿಗೆ 20 ವರ್ಷ ಜೈಲು, 50 ಸಾವಿರ ರೂ. ದಂಡ ವಿಧಿಸಿ ಕೋರ್ಟ್‌ ಆದೇಶ

ವಿಜಯಪಥ ಸಮಗ್ರ ಸುದ್ದಿ

ವಿರಾಜಪೇಟೆ: ಎಂಟು ವರ್ಷದ ಬಾಲಕಿ ಪುಸಲಾಯಿಸಿ ದೌರ್ಜನ್ಯ ಎಸಗಿದ್ದ 70 ವರ್ಷದ ವೃದ್ಧನೊಬ್ಬನಿಗೆ ವಿರಾಜಪೇಟೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಗೋಣಿಕೊಪ್ಪ ಮೈಸೂರಮ್ಮ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ದಿ ತಂಗಪ್ಪನ್ ಎಂಬುವರ ಮಗ ಅಪ್ಪುಕುಟ್ಟಿ ಎಂಬವರೆ ಕೃತ್ಯ ಎಸಗಿದ ಅಪರಾಧಿ.

ಗೊಣಿಕೊಪ್ಪ ಮೈಸೂರಮ್ಮ ಕಾಲೋನಿಯಲ್ಲಿ ಮೂವರು ಹೆಣ್ಣು ಮಕ್ಕಳೊಂದಿಗೆ ದಂಪತಿ ವಾಸವಾಗಿದ್ದರು. ಪತಿ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ತಾಯಿ ಮೂವರು ಮಕ್ಕಳೊಂದಿಗೆ ವಾಸವಾಗಿದ್ದರು. ಇನ್ನು ಹಿರಿಯ ಮಗಳು ವಸತಿ ಶಾಲೆಯಲ್ಲಿ ಹಾಗೂ ಇಬ್ಬರು ಗೋಣಿಕೊಪ್ಪಲಿನ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಈ ಮಧ್ಯೆ 2022ರ ನ.16ರಂದು ಆರೋಪಿ ಅಪ್ಪುಕುಟ್ಟಿ ಶಾಲೆಯಿಂದ ಮನೆಗೆ ಹಿಂದುರುಗುತ್ತಿದ್ದ 8 ವರ್ಷದ ಬಾಲಕಿಯನ್ನು ತನ್ನ ಅಂಗಡಿಗೆ ಕರೆಯಿಸಿಕೊಂಡು ಸಿಹಿ ತಿನಿಸು ನೀಡಿ ಪುಸಲಾಯಿಸಿದ್ದ ನಂತರ ಸಮೀಪದ ಮನೆಯಲ್ಲಿ ಟಿವಿ ತೋರಿಸುವ ಆಸೆ ತೋರಿಸಿ ಕರೆದೊಯ್ದು ದೌರ್ಜನ್ಯ ಎಸಗಿದ್ದ.

ಈ ವಿಚಾರವನ್ನು ಬಾಲಕಿ ತಾಯಿಯ ಬಳಿ ಹೇಳಿಕೊಂಡಿದ್ದಳು. ಬಳಿಕ ತಾಯಿ ಗೋಣಿಕೊಪ್ಪಲು ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿರಾಜಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧಿಕ್ಷಕ ಎಸ್.ನಿರಂಜನ್ ರಾಜೇ ಅರಸ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ದೌರ್ಜನ್ಯ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿಯಲ್ಲಿ ದಾಖಸಿದ್ದ ಪ್ರಕರಣವನ್ನು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾ.ಎಸ್.ನಟರಾಜು ಅವರು ಆರೋಪಿಯ ವಿರುದ್ಧ ದಾಖಲಾದ ಪ್ರಕರಣಗಳು ಸಾಭಿತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ.

ಪೋಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದ್ದು ದಂಡ ಕಟ್ಟಲು ವಿಫಲರಾದರೆ 6 ತಿಂಗಳ ಸಾದಾ ಜೈಲುವಾಸ ಅನುಭವಿಸುವಂತೆ ತೀರ್ಪು ನೀಡಲಾಗಿದೆ. ಇನ್ನು ಸಂತ್ರಸ್ತ ಬಾಲಕಿಗೆ 7 ಲಕ್ಷ ರೂ.ಗಳನ್ನು ಸರ್ಕಾರದಿಂದ ಪರಿಹಾರ ರೂಪದಲ್ಲಿ ಕೊಡುವಂತೆ ಆದೇಶಿಸಲಾಗಿದೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಯಾಸೀನ್ ಅಹಮದ್ ವಾದ ಮಂಡಿಸಿದ್ದರು.

Megha
the authorMegha

Leave a Reply

error: Content is protected !!