ಬೆಂಗಳೂರು ಕರ್ನೂಲ್: ಬೈಕ್ಗೆ ಡಿಕ್ಕಿ ಹೊಡೆದ ವೋಲ್ವೋ ಬಸ್ನಲ್ಲಿ ಬೆಂಕಿ -ಕ್ಷಣಾರ್ಧದಲ್ಲಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನ

ಬೆಂಗಳೂರು: ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ವೋಲ್ವೋ ಬಸ್ಸೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಬಸ್ ಕೆಳಗೆ ಹೋಗಿದ್ದರಿಂದ ಬೆಂಕಿಹೊತ್ತುಕೊಂಡು ಕ್ಷಣಾರ್ಧದಲ್ಲಿ ಸುಟ್ಟುಭಸ್ಮವಾಗಿದ್ದು, ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಬಸಕ್ಕೆ ಬೈಕ್ ಬಸ್ ಕೆಳಗೆ ತೋರಿಕೊಂಡು ಹೋಗಿದೆ ಈ ವೇಳೆ ಬೆಂಕಿ ಕಿಡಿಹೊತ್ತಿಕೊಂಡ ಪರಿಣಾಮ ದ್ವಿಚಕ್ರ ವಾಹನ ಸವಾರ ಸೇರಿದಂತೆ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಚಾಲಕರು ಸೇರಿದಂತೆ ಬಸ್ನಲ್ಲಿ 42 ಮಂದಿ ಇದ್ದರು.
ಘಟನೆ ವಿವರ: ಖಾಸಗಿ ವೋಲ್ವೋ ಬಸ್ ತಡರಾತ್ರಿ ಹೈದರಾಬಾದ್ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿತ್ತು. ಬೆಳಗಿನ ಜಾವ 3.30ರ ಸುಮಾರಿಗೆ ಬಸ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕರ್ನೂಲ್ ಬಳಿ ಬರುತ್ತಿದ್ದಾಗ ಅದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಬಸ್ನ ಇಂಜಿನ್ ಇರುವ ಭಾಗದಲ್ಲಿ ಸಿಲುಕಿಕೊಂಡಿದ್ದರಿಂದ ಕಿಡಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬಸ್ನಲ್ಲಿ 40 ಪ್ರಯಾಣಿಕರು ಇದ್ದರು. ಬಸ್ ಬೆಂಕಿಗೆ ಆಹುತಿಯಾಗುತ್ತಿದ್ದಂತೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಬಸ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಿಟಕಿಗಳನ್ನು ಒಡೆದು 20 ಮಂದಿ ಪ್ರಯಾಣಿಕರು ಬಸ್ನಿಂದ ಜಿಗಿದಿದ್ದಾರೆ.
ಇನ್ನು ಅಪಘಾತದಲ್ಲಿ 20 ಮಂದಿ ಸಜೀವ ದಹನಗೊಂಡಿದ್ದು, ಸುಮಾರು 20 ಜನರನ್ನು ರಕ್ಷಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಎಸಿ ಬಸ್ ಆಗಿರುವುದರಿಂದ, ಪ್ರಯಾಣಿಕರು ಕಿಟಕಿಗಳನ್ನು ಒಡೆದು ಹೊರಬರಬೇಕಾಯಿತು. ಇನ್ನು ಕಿಟಕಿ ಗ್ಲಾಸ್ ಒಡೆಯಲು ಸಾಧ್ಯವಾಗದವರು ಮೃತಪಟ್ಟಿದ್ದಾರೆ ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ತಿಳಿಸಿದ್ದಾರೆ.
ಬಸ್ ಬೆಂಕಿಗಾಹುತಿಯಾದ ವಿಷಯ ತಿಳಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಸರ್ಕಾರ ನಿಮ್ಮ ಜತೆಗಿದೆ ಎಂದು ಭರವಸೆ ನೀಡಿದ್ದಾರೆ.

Related








