- 4.90 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಇಂದು ಚಾಲನೆ
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಅಂತರಹಳ್ಳಿ ಮತ್ತು ನೆಲ್ಲುಕುಂಟೆ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ನೆರವೇರಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಅಂತರಹಳ್ಳಿ ರಸ್ತೆ ಕಾಮಗಾರಿಗೆ ಪಿ.ಎಸ್.ಆರ್ ನಿಧಿಯಿಂದ 2.25 ಕೋಟಿ ಹಾಗೂ ಪಿ. ಡಬ್ಲ್ಯೂ.ಡಿ ನಿಧಿಯಿಂದ 2.25 ಕೋಟಿ ವೆಚ್ಚದಲ್ಲಿ ಕಮಳೂರು ಕ್ರಾಸ್ ನಿಂದ ಅಂತರಹಳ್ಳಿ ಹಾಗೂ ಅಲ್ಲಾಳಸಂದ್ರ ಮೂಲಕ ಬಚ್ಚಹಳ್ಳಿಗೆ ಸಂಪರ್ಕಿಸುವ ರಸ್ತೆಗೆ ಗುದ್ದಲಿ ಪೂಜೆಯನ್ನು ಮಾಡಿದರು. ಇದರ ಜೊತೆಗೆ
ತಿಪ್ಪೂರು ಗ್ರಾಮ ಪಂಚಾಯಿತಿಯ ನೆಲ್ಲುಕುಂಟೆಯಿಂದ ಗುಂಡಮಗೆರೆ ಗ್ರಾಮದವರೆಗೆ 40 ಲಕ್ಷ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲು ಚಾಲನೆ ನೀಡಿದರು.
ಬಳಿಕ ಮಾತನಾಡಿ, ನಾನು ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ, ಅಭಿವೃದ್ಧಿಯ ವಿಷಯಕ್ಕೆ ಬಂದರೆ ಜಿಲ್ಲೆಯ ನಾಲ್ಕು ತಾಲ್ಲೂಕಿನ ಸಮಸ್ತ ಅಭಿವೃದ್ಧಿಗೆ ಪಣತೊಟ್ಟಿದ್ದೇವೆ. ದೇಶ ಮುಂದುವರೆಯ ಬೇಕಾದರೆ ಮೊದಲು ಹಳ್ಳಿಗಳಲ್ಲಿ ಪ್ರಗತಿಯನ್ನು ಸಾಧಿಸಬೇಕು, ಅದಕ್ಕಾಗಿ ನಾವು ಸದಾ ನಿಮ್ಮೊಂದಿಗೆಯಿದ್ದೇವೆ.
ತೀರಾ ಕಳಪೆ ಮಟ್ಟದ ರಸ್ತೆಗಳನ್ನು ನನಗೆ ಪಟ್ಟಿ ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಿಯನುಸಾರವಾಗಿ ರಸ್ತೆ ದುರಸ್ತಿ ಕಾಮಗಾರಿಯನ್ನು ಆದಷ್ಟೂ ಬೇಗ ಮಾಡುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ಜನಪ್ರಿಯ ಕೆಲಸಗಳನ್ನು ಮಾಡುತ್ತಿದ್ದು, ನಮ್ಮ ಗುರಿ ಜಿಲ್ಲೆಯನ್ನು ಅಭಿವೃದ್ಧಿ ಮಾಡುವುದು ಎಂದು ಹೇಳಿದರು.
ಹಾಗೇ ಸಾರ್ವಜನಿಕರ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿ, ರಸ್ತೆ ಕಾಮಗಾರಿ ಮುಗಿದ ಮರುಕ್ಷಣವೇ ಗುಂಡಮಗೆರೆ ಕ್ರಾಸ್ ಯಿಂದ ಬಿಎಂಟಿಸಿ ಬಸ್ ನ್ನು ನೆಲ್ಲುಕುಂಟೆಗೆ ಬರುವಂತೆ ಮಾಡಿ, ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಬಿ ರಾಜಣ್ಣ, ಎಸಿ ದುರ್ಗಶ್ರೀ, ತಾಲ್ಲೂಕು ಇಒ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಚಿದಾನಂದ, ಮುನಿರಾಜು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಮುಖಂಡರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related









