NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರಿಗೆ 26 ತಿಂಗಳ ಹಿಂಬಾಕಿ ನೀಡಲು ಈಗಾಗಲೇ ಒಪ್ಪಿದ್ಧೇವೆ- ಉಳಿದ ಸಮಸ್ಯೆ ಮಾ.2ರಂದು ಚರ್ಚಿಸೋಣ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡರು ಮಾರ್ಚ್ 2ರಿಂದ ನಡೆಸಲು ಉದ್ದೇಶಿಸಿದ್ದ ಧರಣಿ ಸತ್ಯಾಗ್ರಹವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಜತೆಗೆ ಮಾತುಕತೆ ನಡೆಸಿದ ಬಳಿಕ ಹಿಂತೆಗೆದುಕೊಂಡಿದ್ದಾರೆ.

ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 38 ತಿಂಗಳ ಹಿಂಬಾಕಿ ನೀಡಬೇಕು. 2024ರ ಜನವರಿ 1ರಿಂದ ವೇತನ ಪರಿಷ್ಕರಿಸಬೇಕು ಎಂದು ಆಗ್ರಹಿಸಿ ಮಾರ್ಚ್ 2ರಿಂದ ಪ್ರತಿದಿನ ಎರಡು ವಿಭಾಗಗಳ ನೌಕರರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಧರಣಿ ನಡೆಸಲು ಕ್ರಿಯಾ ಸಮಿತಿ ನಿರ್ಧರಿಸಿತ್ತು.

ಈ ಹಿನ್ನೆಲೆಯಲ್ಲಿ ಗುರುವಾರ ಕ್ರಿಯಾಸಮಿತಿಯ ಮುಖಂಡರೊಂದಿಗೆ ಸಾರಿಗೆ ಸಚಿವರು ಒಂದು ಸುತ್ತಿನ ಸಭೆ ನಡೆಸಿ 38 ತಿಂಗಳಲ್ಲಿ 26 ತಿಂಗಳ ಹಿಂಬಾಕಿಯನ್ನು ನೀಡಲು ಈಗಾಗಲೇ ಒಪ್ಪಿಗೆ ನೀಡಲಾಗಿದೆ. ಉಳಿದ ಸಮಸ್ಯೆಗಳ ಬಗ್ಗೆ ಮಾರ್ಚ್ 2ರಂದು ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಅಲ್ಲದೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು. ಹಾಗಾಗಿ ಧರಣಿ ಸತ್ಯಾಗ್ರಹವನ್ನು ವಾಪಸ್ ಪಡೆಯಲು ಜಂಟಿ ಕ್ರಿಯಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.

ಸಭೆಯಲ್ಲಿ ಮುಖಂಡರಾದ ವಿಜಯಭಾಸ್ಕರ್ ಡಿ.ಎ., ಬಿ. ಜಯದೇವರಾಜೇ ಅರಸ್, ಎಚ್.ಡಿ. ರೇವಪ್ಪ, ವೆಂಕಟರಮಣಪ್ಪ, ಎ. ಸೋಮಣ್ಣ, ಎಚ್.ಆರ್.ಜಗದೀಶ್, ಗಂಡಸಿ ಸದಾನಂದ ಸ್ವಾಮಿ ಮತ್ತಿತರರು ಇದ್ದರು.

Megha
the authorMegha

Leave a Reply

error: Content is protected !!