ಜ.29ರ ಸಾರಿಗೆ ನೌಕರರ ಮುಷ್ಕರದಲ್ಲಿ ಜತೆಯಾಗುತ್ತೇವೆ: ಸಿಎಂಗೆ ಬಹಿರಂಗ ಪತ್ರ ಬರೆದ ಬಿಎಂಟಿಸಿ ಮಾಜಿ ಉಪಾಧ್ಯಕ್ಷ

- ನೌಕರರ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಡಾ.ಎಂ.ಆರ್.ವೆಂಕಟೇಶ್
ಬೆಂಗಳೂರು: ರಾಜ್ಯ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆ, 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮತ್ತು ನಿಗಮದ ಆರ್ಥಿಕ ಉಳಿವಿಗೆ ಆಗ್ರಹಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಾಜಿ ಉಪಾಧ್ಯಕ್ಷ ಡಾ.ಎಂ.ಆರ್.ವೆಂಕಟೇಶ್ ಸಿಎಂಗೆ ಬಹಿರಂಗ ಪತ್ರ ಬರೆದಿದ್ದಾರೆ.

ಜ.18ರ ನಿನ್ನೆ ಸಿಎಂಗೆ ಪತ್ರ ಬರೆದಿರುವ ಅವರು, ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯದ ಬೆನ್ನೆಲುಬಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) – ಈ ನಾಲ್ಕೂ ನಿಗಮಗಳು ಒಟ್ಟಾಗಿ ಲಕ್ಷಾಂತರ ಜನರಿಗೆ ದೈನಂದಿನ ಸಂಚಾರ ಸೇವೆ ಒದಗಿಸುತ್ತಿವೆ. ಆದರೆ, ಪ್ರಸ್ತುತ ಲಭ್ಯವಿರುವ ದತ್ತಾಂಶಗಳು ಮತ್ತು ವರದಿಗಳ ಪ್ರಕಾರ, ಈ ನಿಗಮಗಳು ತೀವ್ರವಾದ ಆರ್ಥಿಕ ಸಂಕಷ್ಟ, ಆಡಳಿತಾತ್ಮಕ ಸವಾಲುಗಳು ಮತ್ತು ಕಾರ್ಮಿಕ ಆಶಾಂತಿಯ ಸುಳಿಯಲ್ಲಿ ಸಿಲುಕಿವೆ.
ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿಗಳಲ್ಲಿ ‘ಶಕ್ತಿ ಯೋಜನೆ’ಯೂ ಪ್ರಮುಖವಾಗಿದ್ದು, ಇದರ ಯಶಸ್ವಿ ಅನುಷ್ಠಾನಕ್ಕೆ ಸಾರಿಗೆ ಇಲಾಖೆಯ ಪ್ರತಿಯೊಬ್ಬ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, “ದೀಪದ ಕೆಳಗೆ ಕತ್ತಲು” ಎಂಬಂತೆ, ಇಡೀ ರಾಜ್ಯಕ್ಕೆ ಶಕ್ತಿ ತುಂಬುತ್ತಿರುವ ಸಾರಿಗೆ ನೌಕರರೇ ಇಂದು ಆಶಕ್ತರಾಗಿದ್ದಾರೆ.
ನಿಗಮಗಳ ಒಟ್ಟು ಸಾಲದ ಹೊರೆ 7,009.25 ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ಭವಿಷ್ಯ ನಿಧಿ (PF) ಮತ್ತು ನಿವೃತ್ತ ನೌಕರರ ಸವಲತ್ತುಗಳ ಬಾಕಿಯೂ ಸೇರಿದೆ. ಸರ್ಕಾರದ ಪ್ರಮುಖ “ಗ್ಯಾರಂಟ್’ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದ್ದರೂ, ಸರ್ಕಾರದಿಂದ ನಿಗಮಗಳಿಗೆ ಬರಬೇಕಾದ ಮರುಪಾವತಿಯಲ್ಲಿನ ವಿಳಂಬವು ನಿಗಮಗಳ ದೈನಂದಿನ ನಿರ್ವಹಣೆಯನ್ನು ಕಷ್ಟಕರವಾಗಿಸಿದೆ.
ಇನ್ನು ಈ ಸಂಬಂಧ 2023-24 ಮತ್ತು 2024-25ನೇ ಸಾಲಿನಲ್ಲಿ ನಾಲ್ಕೂ ನಿಗಮಗಳ ಆರ್ಥಿಕ ಚಿತ್ರಣವನ್ನು ಈ ಕೆಳಗೆ ನೀಡಲಾಗುತ್ತಿದೆ. ಇದು ವೆಚ್ಚವು ಆದಾಯಕ್ಕಿಂತ ನಿರಂತರವಾಗಿ ಹೆಚ್ಚಿರುವುದನ್ನು ತೋರಿಸುತ್ತದೆ.

ಶಕ್ತಿ ಯೋಜನೆ ಯಶಸ್ಸೇ?: ಕರ್ನಾಟಕ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿಗಳಲ್ಲಿ ‘ಶಕ್ತಿ ಯೋಜನೆ’ ಅತ್ಯಂತ ಜನಪ್ರಿಯವಾದದ್ದು. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಈ ಯೋಜನೆಯು ಸಾಮಾಜಿಕವಾಗಿ ಮಹಿಳಾ ಸಬಲೀಕರಣಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದರೆ, ಆರ್ಥಿಕವಾಗಿ ಇದು ಸಾರಿಗೆ ನಿಗಮಗಳಿಗೆ “ಶಕ್ತಿದಾತರೇ ಅಶಕ್ತರಾಗುವ ಪರಿಸ್ಥಿತಿಯನ್ನು ತಂದಿಟ್ಟಿದೆ.
ಶಕ್ತಿ ಯೋಜನೆಯಡಿ ಮಹಿಳೆಯರು ಪಡೆಯುವ “ಶೂನ್ಯ ದರದ ಟಿಕೆಟ್” ಮೌಲ್ಯವನ್ನು ಸರ್ಕಾರವು ನಿಗಮಗಳಿಗೆ ಮರುಪಾವತಿ ಮಾಡಬೇಕಿದೆ. ಆದರೆ, ಈ ಮರುಪಾವತಿ ಪ್ರಕ್ರಿಯೆಯಲ್ಲಿನ ವಿಳಂಬವೇ ಇಂದಿನ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಈ ಹಿಂದೆಯೂ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ 2025ರ ಜುಲೈ 19ರಂದು ತಮಗೆ ಪತ್ರ ಬರೆಯಲಾಗಿತ್ತು ಎನ್ನುವುದನ್ನು ಇಲ್ಲಿ ನೆನಪಿಸಬಯಸುತ್ತೇನೆ.
ಈ ಪತ್ರದ ಮೂಲಕ ಸರ್ಕಾರದ ಗಮನಕ್ಕೆ ತರಬಯಸುವ ಪ್ರಮುಖ ಮತ್ತು ತುರ್ತು ವಿಚಾರಗಳು ಎಂದರೆ…
ಶಕ್ತಿ ಯೋಜನೆಯ ಶ್ರೇಯಸ್ಸು ಮತ್ತು ಹೊರೆ: ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಅವರ ಸಂಪೂರ್ಣ ರಾಜಕೀಯ ಮತ್ತು ಸಾಮಾಜಿಕ ಶ್ರೇಯಸ್ಸನ್ನು ಸರ್ಕಾರ ಪಡೆದುಕೊಳ್ಳುತ್ತಿದೆ. ಆದರೆ, ಈ ಯೋಜನೆಯನ್ನು ಮೈಮುರಿದು ದುಡಿದು ಅನುಷ್ಠಾನ ಮಾಡುತ್ತಿರುವ ನಿಗಮದ ಆರೋಗ್ಯ ಹಾಗೂ ನೌಕರರ ಬಗ್ಗೆ ಸರ್ಕಾರ ಕಿಂಚಿತ್ತೂ ಗಮನ ನೀಡುತ್ತಿಲ್ಲ. ಶಕ್ತಿ ಯೋಜನೆಯಡಿ ನಿಗಮಕ್ಕೆ ಬರಬೇಕಾದ ಸಾವಿರಾರು ಕೋಟಿ ರೂಪಾಯಿಗಳ ಮರುಪಾವತಿ ಬಾಕಿ ಉಳಿದಿದೆ. ಸರ್ಕಾರ ಹಣ ನೀಡದಿದ್ದರೆ ಬಸ್ಸುಗಳಿಗೆ ಡೀಸೆಲ್ ಹಾಕಿಸುವುದು ಹೇಗೆ? ನೌಕರರಿಗೆ ಸಂಬಳ ನೀಡುವುದು ಹೇಗೆ?
ಗ್ಯಾರಂಟಿ ಯೋಜನೆಗಳ ಲೋಪ: ಬಹುತೇಕ ಎಲ್ಲ ಗ್ಯಾರಂಟಿ ಘೋಷಣೆಗಳು ಒಂದಿಲ್ಲೊಂದು ಬೋಪ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿವೆ ಎನ್ನಾವುದು ವಾಸ್ತವ, ಯೋಜನೆ ಜಾರಿ ಮಾಡುವ ಆತುರದಲ್ಲಿ, ಅದನ್ನು ನಿರ್ವಹಿಸುವ ಸಂಸ್ಥೆಗಳ ಆರ್ಥಿಕ ಸಾಮರ್ಥ್ಯವನ್ನು ಸರ್ಕಾರ ಮರೆತಿದೆ. ಹೀಗೆಯೇ ಮುಂದುವರಿದು ಸಾರಿಗೆ ನಿಗಮವು ಆರ್ಥಿಕವಾಗಿ ಕುಸಿದು ಸಂಕಷ್ಟಕ್ಕೆ ಸಿಲುಕಿದರೆ ಕೊನೆಗೆ ಸಾರ್ವಜನಿಕರೇ ತೊಂದರೆಗೆ ಈಡಾಗುತ್ತಾರೆ. ಬಸ್ಸುಗಳು ನಿಂತರೆ ರಾಜ್ಯವೇ ನಿಂತಂತೆ ಎಂಬುದನ್ನು ಸರ್ಕಾರ ಅರಿಯಬೇಕು.
ವೇತನ ಹಿಂಬಾಕಿ ಮತ್ತು ಸಾಲದ ಸುಳಿ: ನೌಕರರಿಗೆ ಸೇರಬೇಕಾದ 38 ತಿಂಗಳ ವೇತನ ಹಿಂಬಾಕಿಯನ್ನು (Arrears) ನೀಡದೆ ಸತಾಯಿಸುತ್ತಿರುವುದು ಅನ್ಯಾಯ. ಚಿತ್ರಣಗಳು ತೋರಿಸುವಂತೆ, ನಿಗಮದ ಸಾಲದ ಹೊರೆ 7,000 ಕೋಟಿ ರೂ. ಮೀರಿದೆ. ನಿವೃತ್ತರಾದ ನೌಕರರಿಗೆ ಉಪಧನ ನೀಡಲು ಹಣವಿಲ್ಲ, ಹಾಲಿ ನೌಕರರ ಪಿ.ಎಫ್ ಹಣವನ್ನೂ ಬಳಸಿಕೊಳ್ಳಲಾಗುತ್ತಿದೆ. ಇದು ನೌಕರರ ಭವಿಷ್ಯದೊಂದಿಗೆ ಆಡುತ್ತಿರುವ ಚೆಲ್ಲಾಟವಾಗಿದೆ.
ಪ್ರಮುಖ ಬೇಡಿಕೆಗಳು: ಬಾಕಿ ಇರುವ 38 ತಿಂಗಳ ಸಂಪೂರ್ಣ ವೇತನ ಹಿಂಬಾಕಿಯನ್ನು ಬಿಡುಗಡೆ ಮಾಡಬೇಕು.
ಶಕ್ತಿ ಯೋಜನೆಯ ಬಾಕಿ ಹಣವನ್ನು ತಕ್ಷಣವೇ ನಿಗಮಕ್ಕೆ ಪಾವತಿಸಬೇಕು. ನೌಕರರ ಮತ್ತು ನಿಗಮದ ಆರ್ಥಿಕ ಹಿತಾಸಕ್ತಿ ಕಾಪಾಡಲು ಶಾಶ್ವತ ಪರಿಹಾರ ಕಲ್ಪಿಸಬೇಕು.
ಮುಷ್ಕರದ ಎಚ್ಚರಿಕೆ: ಸಮಸ್ಯೆಗೆ ಕೂಡಲೇ ಸ್ಪಂದಿಸದಿದ್ದರೆ ಜನವರಿ 29ರಂದು ಮುಷ್ಕರ ನಡೆಸುವುದಾಗಿ ಹಾಗೂ ಬೆಂಗಳೂರು ಚಲೋ ಕೈಗೊಳ್ಳುವುದಾಗಿ ನೌಕರರ ಒಕ್ಕೂಟಗಳು ಎಚ್ಚರಿಕೆ ನೀಡಿವೆ. ‘ನೋಟಿಸ್ ನೀಡದೇ ಮುಷ್ಕರ ನಡೆಸುವ ಹಂತಕ್ಕೆ ನೌಕರರು ತಲುಪಿದ್ದಾರೆ ಎಂಬುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಪದೇಪದೆ ನೌಕರರನ್ನು ಸತಾಯಿಸುವುದು. ಹೊಸ ಗಡುವು ನೀಡಿ ಅದನ್ನು ಈಡೇರಿಸದೇ ಇರುವುದು ಸರ್ಕಾರವೊಂದಕ್ಕೆ ಮಹಾ ಅಪಮಾನದ ಸಂಗತಿ. ಹೀಗೆ ನೌಕರರು ಜನವರಿ 29ರಂದು ನಡೆಸುವ ಮುಷ್ಕರಕ್ಕೆ ನಾವು ಸಂಪೂರ್ಣ ಜತೆಯಾಗಲಿದ್ದೇವೆ. ಪರಿಸ್ಥಿತಿ ಅಲ್ಲಿವರೆಗೆ ವಿಷಮಕ್ಕೆ ತಿರುಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಈ ಮೂಲಕ ಆಗ್ರಹಿಸುತ್ತೇವೆ. ತಮ್ಮಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ ಎಂದು ಬಿಎಂಟಿಸಿ ಮಾಜಿ ಉಪಾಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ.
Related









