ಕೃಷ್ಣಗಿರಿ: ಹೆಚ್ಚು ಮಳೆ ಬಂದಾಗ ಕಾವೇರಿ ನೀರು ಸಮುದ್ರಕ್ಕೆ ಹರಿಯುವುದನ್ನು ತಡೆಗಟ್ಟಿ ಎರಡು ರಾಜ್ಯದ ರೈತರು ಬಳಸಿಕೊಂಡರೆ ತಪ್ಪೇನು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿಯಲ್ಲಿ ಇಂದು (ಜು.5) ಆಯೋಜಿಸಿದ್ದ ಬೃಹತ್ ರೈತ ಸಮಾವೇಶದಲ್ಲಿ ಮಾತನಾಡಿದರು.
ತಮಿಳುನಾಡು- ಕರ್ನಾಟಕ ಈ ಎರಡೂ ರಾಜ್ಯಗಳ ರಾಜಕೀಯ ಪಕ್ಷಗಳು ಸರ್ಕಾರಗಳು ರಾಜಕೀಯ ಗೊಂದಲ ಮಾಡಬಾರದು ಇದು ರೈತರ ಬದುಕಿನ ಪ್ರಶ್ನೆಯಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಮೇಕೆದಾಟು ಯೋಜನೆ ಸಾಧ್ಯವಾದರೆ 50 ಟಿಎಂಸಿ ನೀರು ಸಂಗ್ರಹಿಸಬಹುದು ಎಂದು ವಿವರಿಸಿದರು.
ಮಳೆ ಬರದ ಇಂಥ ಸಂಕಷ್ಟ ಕಾಲದಲ್ಲಿ ನೀರು ಸಂಗ್ರಹವಾಗಿದ್ದರೆ ಅದನ್ನು ಬಳಸಿಕೊಳ್ಳಬಹುದು ಎಂಬುದನ್ನು ನಾವೆಲ್ಲ ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.
ಇನ್ನು ವಿಶ್ವ ವ್ಯಾಪಾರ ಒಪ್ಪಂದ ನೀತಿಯಿಂದ ಕೇಂದ್ರ ಸರ್ಕಾರ ಆಮದು ಸುಂಕ ವಿನಾಯಿತಿ ನೀಡಿದ ಕಾರಣ ಮಲೇಶಿಯಾ ದೇಶದಿಂದ ತಾಳೆ ಎಣ್ಣೆ, ಚೀನಾ ದೇಶದಿಂದ ರೇಷ್ಮೆ ಆಮದು ಮಾಡಿಕೊಂಡ ಕಾರಣ ದೇಶದ ತೆಂಗು ಬೆಳೆಗಾರರು ಹಾಗೂ ರೇಷ್ಮೆ ಬೆಳೆಗಾರರು ಬೆಲೆ ಕುಸಿತದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಸಮಾವೇಶದಲ್ಲಿ ತೆಲಂಗಾಣ ರಾಜ್ಯದ ನರಸಿಂಹ ನಾಯ್ಡು ಮಾತನಾಡಿದರು. ತಮಿಳುನಾಡಿನ ರೈತ ಮುಖಂಡ ರಾಮನ್ ಗೌ೦ಡರ ಸಮಾವೇಶ ಆಯೋಜಿಸಿ ಅಧ್ಯಕ್ಷತೆ ವಹಿಸಿದ್ದರು. ನೂರಾರು ರೈತರು, ರೈತ ಮುಖಂಡರು ಭಾಗವಹಿಸಿದ್ದರು.