NEWSನಮ್ಮಜಿಲ್ಲೆನಮ್ಮರಾಜ್ಯ

NWKRTC ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಆಗೋದ್ಯಾವಾಗ: ವಿಧಾನಮಂಡಲ ಶೂನ್ಯ ವೇಳೆಯಲ್ಲಿ ಚನ್ನರಾಜ್ ಹಟ್ಟಿಹೊಳಿ ಪ್ರಸ್ತಾಪ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಸರನ್ನು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂದು ನಾಮಕರಣ ಮಾಡುವ ಕುರಿತು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ವಿಧಾನಮಂಡಳದ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.

ಮೇಲ್ಮನೆಯಲ್ಲಿ ಮಂಗಳವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಪತ್ರಿಕೆಯೊಂದರಲ್ಲಿ ಪ್ರಕಟವಾದ ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಆಗೋದ್ಯಾವಾಗ? ಎಂಬ ತಲೆಬರಹದ ವಿಷಯವನ್ನು ಪ್ರಸ್ತಾಪಿಸಿದರು.‌

ಕಿತ್ತೂರು ಕರ್ನಾಟಕ ಜನತೆಯ ಆಶಯದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಸರನ್ನು ಬದಲಿಸಿ, ರಾಣಿ ಚನ್ನಮ್ಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಆರ್‌ಸಿಆರ್‌ಟಿಸಿ) ಎಂದು ನಾಮಕರಣಕ್ಕೆ ಸಾರಿಗೆ ನಿಗಮ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿದ್ದು, ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಕಿತ್ತೂರು ಕರ್ನಾಟಕ ಭಾಗದಲ್ಲಿ 28 ವರ್ಷಗಳಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹೆಸರು ಮನೆ ಮಾತಾಗಿದೆ. ಕಿತ್ತೂರು ಕರ್ನಾಟಕ ಎಂದು ಘೋಷಣೆಯಾದ ಬಳಿಕ, ”ಕಿತ್ತೂರು ಕರ್ನಾಟಕ ಸಾರಿಗೆ ನಿಗಮ” ಎಂದು ಬದಲಿಸುವಂತೆ 2021ರಿಂದ ಈ ಭಾಗದ ಹೋರಾಟಗಾರರು ಮನವಿ ಮಾಡುತ್ತಿದ್ದಾರೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೆಸರನ್ನು 2021ರಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಎಂದು ಸರ್ಕಾರ ಬದಲಿಸಿದೆ.

ಅದೇ ರೀತಿ ಮುಂಬೈ ಕರ್ನಾಟಕ ಪ್ರದೇಶವನ್ನು ”ಕಿತ್ತೂರ ಕರ್ನಾಟಕ” ಎಂದು ಹೆಸರು ಬದಲಿಸಿ ಅಧಿಸೂಚನೆ ಹೊರಡಿಸಿದೆ. ಆದರೆ, ಸಾರಿಗೆ ಸಂಸ್ಥೆ ಹೆಸರಿನಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳ ಕನ್ನಡಪರ ಸಂಘಟನೆಗಳು ಹಾಗೂ ನಾಗರಿಕರು ಹೆಸರು ಬದಲಾವಣೆಗೆ ಆಗ್ರಹಿಸಿದ್ದಾರೆ ಎಂದು ಪ್ರಸ್ತಾಪಿಸಿದರು.

ಈ ಭಾಗದ ಶಾಸಕ ರಾಜು ಕಾಗೆ ಅವರು NWKRTC ಅಧ್ಯಕ್ಷರಾದ ಮೇಲೆ ಕನ್ನಡಪರ ಹೋರಾಟಗಾರರು ಹೆಚ್ಚಿನ ಒತ್ತಡ ತಂದಿದ್ದರು. ಇದರಿಂದ 2025ರ ಫೆ. 17ರಂದು ನಡೆದ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ”ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ” ಎಂದು ಮರು ನಾಮಕರಣಕ್ಕೆ ಠರಾವು ಪಾಸ್‌ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಸರ್ಕಾರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ, ಅಂತಿಮ ಮುದ್ರೆ ನೀಡಬೇಕು. ಪ್ರಸ್ತಾವನೆ ಸಲ್ಲಿಸಿ ಹಲವು ತಿಂಗಳು ಕಳೆದರೂ ಸರ್ಕಾರ ಒಪ್ಪಿಗೆ ನೀಡಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಉತ್ತರ ಕರ್ನಾಟಕ ಪತ್ಯೇಕ ರಾಜ್ಯ, ಅಭಿವೃದ್ಧಿ ಬಗ್ಗೆ ಮಾತನಾಡುವ ಈ ಭಾಗದ ನಾಯಕರು, ಈ ಬಗ್ಗೆ ಮೌನ ವಹಿಸಿದ್ದು ಏಕೆ ಎಂದು ಜನರು ಪ್ರಶ್ನಿಸಿದ್ದಾರೆ ಎಂದು ಹೇಳಿದರು.

NWKRTC ಸಲ್ಲಿಸಿದ್ದ ಪ್ರಸ್ತಾವನೆ ಸ್ವೀಕರಿಸಿರುವ ಸರ್ಕಾರವು, ಸಮಗ್ರ ವರದಿ ನೀಡುವಂತೆ ಸಂಸ್ಥೆಗೆ ನಿರ್ದೇಶನ ನೀಡಿತ್ತು. ಅದರಂತೆ ಈ ಭಾಗದ ಸಂಘ-ಸಂಸ್ಥೆಗಳು, ಸಾರ್ವಜನಿಕರ ಬೇಡಿಕೆ, ಅಭಿಪ್ರಾಯ ಒಳಗೊಂಡ ವರದಿ ನೀಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಉತ್ತರ ಕರ್ನಾಟಕ ವಿಷಯ ಬಂದಾಗ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಾರೆ. ಪ್ರಸ್ತಾವನೆ ಸಲ್ಲಿಕೆಯಾದ ಬಳಿಕ ಹಲವು ಬಾರಿ ರಾಜ್ಯ ಸಂಪುಟ ಸಭೆ ನಡೆದಿವೆ. ಆದರೂ ಈ ಬಗ್ಗೆ ನಿರ್ಧಾರ ಕೈಗೊಳ್ಳದಿರುವುದು ಎಷ್ಟು ಸರಿ? ಎಂದು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.

NWKRTC ಹೆಸರು ಬದಲಿಸಲು ಮೂರೂ ನಿಗಮಗಳ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆಗೆ ಬಂದಿದೆ. ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ, ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಸರುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿತ್ತು. ಕಿತ್ತೂರು ಕರ್ನಾಟಕ ಮತ್ತು ಕಿತ್ತೂರು ರಾಣಿ ಚನ್ನಮ್ಮ ನಾಮಕರಣ ಮಾಡಿದರೆ ಇಂಗ್ಲಿಷ್‌ನಲ್ಲಿ ಕೆಕೆಆರ್‌ಟಿಸಿ ಎಂದಾಗುತ್ತದೆ. ಈಗಾಗಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನೂ ಶಾರ್ಟ್‌ ಕಟ್‌ ಆಗಿ ‘ಕೆಕೆಆರ್‌ಟಿಸಿ’ ಎನ್ನಲಾಗುತ್ತಿದೆ.

ಇದರಿಂದ ಸರ್ಕಾರದ ಮಟ್ಟದಲ್ಲಿ ಚರ್ಚೆ ಮತ್ತು ಅನುದಾನ ಹಂಚಿಕೆ ವೇಳೆ ಗೊಂದಲ ಉಂಟಾಗುವ ಸಾಧ್ಯತೆಗಳಿವೆ. ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ (ಆರ್‌ಸಿಆರ್‌ಟಿಸಿ) ಎಂದು ಮಾಡುವುದರಿಂದ ಗೊಂದಲಕ್ಕೆ ಆಸ್ಪದ ಸಿಗುವುದಿಲ್ಲ. ಹಾಗಾಗಿ ಇದನ್ನು ಅಂತಿಮಗೊಳಿಸಿ ಅದನ್ನೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು ಎಂದು ಹೇಳಿದರು.

NWKRTC ನಿಗಮದ ಹೆಸರು ಬದಲಾಯಿಸಿ ”ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ” ಎಂದು ಮರು ನಾಮಕರಣ ಮಾಡುವಂತೆ ನಿಗಮದ ಮಂಡಳಿ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಈ ವಿಷಯ ಸರಕಾರದ ಮಟ್ಟದಲ್ಲಿದೆ. ಅಂತಿಮವಾಗಿ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆಯಬೇಕು” ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ಹೇಳಿದ್ದಾರೆ ಎಂದು ಚನ್ನರಾಜ್ ಹಟ್ಟಿಹೊಳಿ ತಿಳಿಸಿದರು.

ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ವರದಿಯ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನವನ್ನು ಸೆಳೆದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಬದಲಾಯಿಸುವ ಕುರಿತು ಸರ್ಕಾರದ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಶೂನ್ಯ ವೇಳೆಯಲ್ಲಿ ಮನವಿ ಮಾಡಿದರು.

ಬಳಿಕ ಸಭಾ ನಾಯಕ ಹಾಗೂ ಸಚಿವ ಬೋಸರಾಜು, ಸಂಬಂಧಿಸಿದ ಸಚಿವರಿಂದ ಉತ್ತರ ಕೊಡಿಸಲಾಗುವುದು ಎಂದರು.

Megha
the authorMegha

Leave a Reply

error: Content is protected !!