ಮೈಸೂರು: ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ರೈತ ಸಂಘಟನೆಗಳನ್ನು ಒಡೆದು ರೈತ ಕುಲವನ್ನೇ ನಾಶ ಮಾಡಲು ರಾಜಕೀಯ ಪಕ್ಷಗಳು ಯತ್ನ ನಡೆಸುತ್ತಿವೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ, ರಾಜ್ಯ ರೈತ ಸಂಘಟನೆಗಳು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಆಯೋಜಿಸಿದ್ದ ಕಬ್ಬುಬೆಳೆಗಾರ ರೈತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಬರುತ್ತಿರುವ ಕಾರಣ ಎಲ್ಲ ರಾಜಕೀಯ ಪಕ್ಷಗಳು ಮತ ಬ್ಯಾಂಕ್ ಲೂಟಿ ಮಾಡಲು ಪೈಪೋಟಿ ನಡೆಸುತ್ತಿವೆ. ಬರಗಾಲದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲು ಯಾರು ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ರೈತರ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ಉದ್ಯಮಿಗಳ 12 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ ರೈತರ ಸಾಲ ಯಾಕೆ ಮನ್ನಾ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕಬ್ಬು ಬೆಳೆಗಾರರ ರೈತರ ಶೋಷಣೆ ನಿಲ್ಲಬೇಕಾದರೆ ಕಬ್ಬಿನ ಎಫ್ ಆರ್ ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಸಾಗಣಿಕೆ ದರ ಮನಬಂದಂತೆ ಕಾನೂನು ಬಾಹಿರವಾಗಿ ಕಡಿತ ಮಾಡಿರುವ ಹೆಚ್ಚುವರಿ ಹಣ ರೈತರಿಗೆ ವಾಪಸ್ ಕೂಡಿಸಲು ಸರ್ಕಾರಕ್ಕೆ ಧೈರ್ಯವಿದೆಯೇ ಎಂದು ತರಾಟೆಗೆ ತೆಗೆದುಕೊಂಡರು.
ರೈತರು 39 ದಿನ ಹೋರಾಟ ಮಾಡಿ ಟನ್‌ಗೆ 150 ರೂ. ಹೆಚ್ಚುವರಿ ದರ ನಿಗದಿ ಮಾಡಿ ಆದೇಶ ಹೊರಡಿಸಿದ್ದರು. ಸಕ್ಕರೆ ಕಾರ್ಖಾನೆಗಳು ಇನ್ನೂ ಆ ಹಣ ಪಾವತಿಸಿಲ್ಲ. ಸರ್ಕಾರಕ್ಕೆ ಹಣ ಕೂಡಿಸುವ ಅಥವಾ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವ ನೈತಿಕತೆ ಇಲ್ಲದಿದ್ದರೆ ಸರ್ಕಾರವೇ ರೈತರಿಗೆ ಪಾವತಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 800ಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಾಂತರ ರೈತರು ಕೃಷಿ ತೊರೆದು ಗುಳೆ ಹೋಗುತ್ತಿದ್ದಾರೆ. ಗ್ರಾಮೀಣ ಬ್ಯಾಂಕ್ ಎನ್ನುವ ಹೆಸರಿನಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಸಾಲ ಪಡೆದ ರೈತರಿಗೆ ದುಪ್ಪಟ್ಟು ಹಣ ಪಾವತಿಸುವಂತೆ ನೋಟಿಸ್‌ಗಳನ್ನ ನೀಡುವ ಮೂಲಕ ರೈತರ ಶೋಷಣೆ ಮಾಡುತ್ತಿದೆ. ಎಲ್ಲದರ ವಿರುದ್ಧ ರೈತರು ಜಾಗೃತರಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಕೃಷಿ ಸಾಲ ನೀತಿ ಬದಲಾಗಬೇಕು. ರೈತರು ಕೃಷಿ ಮಾಡಲು ಬ್ಯಾಂಕುಗಳು ಬಡ್ಡಿ ರಹಿತ ಸಾಲ ನೀಡುವಂತೆ ಆಗಬೇಕು. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ತೋರಿಸುವ ಮಾನದಂಡ ಬದಲಾಗಬೇಕು. ಇಳುವರಿ ಮೋಸ, ತೂಕದಲ್ಲಿ ಮೋಸ ತಪ್ಪಿಸಲು ವೈಜ್ಞಾನಿಕ ಮಾನದಂಡ ಅಳವಡಿಸಬೇಕು. ಕೃಷಿಗೆ ಬಳಸುವ ಕೀಟನಾಶಕ ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು ಟ್ರ್ಯಾಕ್ಟರ್ ಬಿಡಿಭಾಗಗಳ ಜಿಎಸ್ಟಿ ತೆರಿಗೆ ರದ್ದುಗೊಳಿಸಬೇಕು ಇದರಿಂದ ರೈತರಿಗೆ ಹೊರೆ ಕಡಿಮೆ ಆಗುತ್ತದೆ ಎಂದರು.
ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ 8 ಲಕ್ಷಕ್ಕೂ ಹೆಚ್ಚು ಬಗರ್ ಹುಕ್ಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ಅಧಿಕಾರಕ್ಕೆ ಬರುವ ಮೊದಲು ರೈತ ಸಂಘಟನೆಗಳಿಗೆ ಭರವಸೆ ನೀಡಿದ್ದಂತೆ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರಾಜ್ಯದಲ್ಲಿ ರದ್ದಾಗಬೇಕು ಎಂದು ಒತ್ತಾಯಿಸಿದರು.
ಗ್ರೀನ್ ಬರ್ಡ್ಸ್ ಆಗ್ರೋ ಕಂಪನಿಗೆ ಠೇವಣಿ ಮಾಡಿ ವಂಚಿತರಾಗಿರುವ 2 ಲಕ್ಷ ಬಡವರು, ಕೂಲಿ ಕಾರ್ಮಿಕರಿಗೆ, ಕಂಪನಿಯಿಂದ ಮುಟ್ಟು ಗೋಲು ಹಾಕಿರುವ ಆಸ್ತಿ ಹರಾಜು ಬೇಗ ಮುಗಿಸಿ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.
ಸಭೆಯ ನಂತರ ನೂರಾರು ರೈತರು ಕುರುಬೂರ್ ಶಾಂತಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಭೇಟಿ ಮಾಡಿ ಕೃಷಿ ಭೂಮಿಯಲ್ಲಿ ಹಾದು ಹೋಗುವ 220 ಕೆವಿ ಸಾಮರ್ಥ್ಯದ ವಿದ್ಯುತ್ ಕಂಬ ಹಾಗೂ ತಂತಿ ಮಾರ್ಗ ಹಾದು ಹೋಗುವ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ರಾಜ್ಯ ಬಜೆಟ್ ಮಂಡನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು. ರೈತರ ಅಭಿವೃದ್ಧಿಗೆ ಪೂರ್ವಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಫೆಬ್ರವರಿ 6ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಾಯ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್, ಕಿರಗಸೂರು ಶಂಕರ, ಸಿದ್ದೇಶ್, ವೆಂಕಟೇಶ, ವಿಜೇಂದ್ರ, ಕೆಂಡಗಣ್ಣಸ್ವಾಮಿ ಪಟೇಲ್ ಶಿವಮೂರ್ತಿ ಕಮಲಮ್ಮ ರೂಪ, ಕೂಡನಳ್ಳಿ ರಾಜಣ್ಣ, ಸುರೇಶ, ಮಂಜುನಾಥ, ಚಾಮರಾಜನಗರ ಜಿಲ್ಲಾ ಕಾರ್ಯಧ್ಯಕ್ಷ ರೇವಣ್ಣ, ತಾಲೂಕು ಅಧ್ಯಕ್ಷ ಸತೀಶ್, ಪ್ರಧಾನ ಕಾರ್ಯದರ್ಶಿ ಸುಂದರಪ್ಪ, ಮೈಸೂರು ಜಿಲ್ಲಾ ಉಪಾಧ್ಯಕ್ಷ ನೀಲಕಂಠಪ್ಪ ಸೇರಿದಂತೆ 250ಕ್ಕೂ ಹೆಚ್ಚು ರೈತರು ರೈತ ಮಹಿಳೆಯರು ಭಾಗವಹಿಸಿದ್ದರು.