NEWSನಮ್ಮಜಿಲ್ಲೆನಮ್ಮರಾಜ್ಯ

ಖಜಾನೆ ತುಂಬಿ ತುಳುಕುತ್ತಿದೆ ಅನ್ನೋರು ಏಕೆ ಸಾರಿಗೆ ನೌಕರರ ಸಮಸ್ಯೆ ಪರಿಹಾರ ಮಾಡ್ತಿಲ್ಲ: ಮಾಜಿ ಸಚಿವ ಆರಗ ಜ್ಞಾನೇಂದ್ರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ಕಾರದ ಖಜಾನೆ ತುಂಬಿ ತುಳುಕುತ್ತಿದೆ ಅಂತ ಹೇಳಿಕೊಂಡು ಬರುವವರಿಗೆ ಸಾರಿಗೆ ನೌಕರರ ಸಮಸ್ಯೆ ಪರಿಹಾರ ಮಾಡೋಕೆ ಏಕೆ ಆಗ್ತಿಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಮಾಡುತ್ತಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಜತೆ ಸರ್ಕಾರ ಮಾತುಕತೆ ನಡೆಸುವಲ್ಲಿ ವಿಫಲವಾಗಿದೆ.

ಹಿಂದೆ ಯಡಿಯೂರಪ್ಪ ಇದ್ದಾಗ ಇದೇ ಸಿದ್ದರಾಮಯ್ಯ ನಮಗೆ ಪ್ರಶ್ನೆ ಮಾಡಿದ್ರು. ಸಾರಿಗೆ ನೌಕರರ ಮೇಲೆ ಎಸ್ಮಾ ಹಾಕಿ ಹೆದರಿಸಿದ್ರು. ನಿನ್ನ ಕುರ್ಚಿ ಎಷ್ಟು ಶಾಶ್ವತ ಎಂದು ತಿಳಿದುಕೊಂಡಿದ್ದೀಯಾ ಅಂತಾ ಪ್ರಶ್ನೆ ಮಾಡಿದ್ದರು. ಈಗ ನಾನು ಸಿದ್ದರಾಮಯ್ಯಗೆ ಪ್ರಶ್ನೆ ಮಾಡ್ತೀನಿ. ನೀವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಾ ಎಂದುಕೊಂಡಿದ್ದೀರಾ ಎಂದು ಅದೇ ಪ್ರಶ್ನೆಯನ್ನು ತಿರುಗಿಸಿದ್ದಾರೆ.

ಇನ್ನು ನೀವು ಫ್ರೀ ಅಂತಾ ನೌಕರರಿಗೆ ಸಂಬಳವನ್ನೇ ಕೊಡುತ್ತಿಲ್ಲ. ನೌಕರರನ್ನು ಕರೆದು ಮಾತಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ನೀವು ಮಾಡಿರುವ ಮೂರ್ಖತನಕ್ಕೆ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಖಾಸಗಿ ಬಸ್‌ನವರು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಜನಸಾಮಾನ್ಯರ ಹಣ ವ್ಯರ್ಥ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ತಕ್ಷಣವೇ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲದಕ್ಕೂ ನಮ್ಮ ಮೇಲೆ ಬೆರಳು ತೋರಿಸ್ತಾರೆ. ಅವರು ಮಾಡಿದನ್ನು ನಾವು ತೀರಿಸಿದ್ದೇವೆ ಎನ್ನುತ್ತಾರೆ.

ಹೌದಪ್ಪ ನಾವು ಕೆಟ್ಟದನ್ನು ಮಾಡಿದ್ದೇವೆ. ಜನ ನಮ್ಮನ್ನು ಸೋಲಿಸಿದ್ದಾರೆ. ನಿಮ್ಮನ್ನು ಗೆಲ್ಲಿಸಿದ್ದಾರಲ್ಲ ನೀವು ಅವರಿಗೆ ಒಳ್ಳೆಯದು ಮಾಡಬೇಕಿತ್ತಲ್ಲ. ಖಜಾನೆ ತುಂಬಿ ತುಳುಕುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ರಿ. ಈಗ ಹಣ ಇಲ್ಲ ಅಂತೀರಲ್ಲ. ನುಡಿದಂತೆ ನಡೆದಿದ್ದೇವೆ ಅಂತೀರಲ್ಲ ಇದೇನಾ ನಿಮ್ಮ ಮಾತು ಎಂದು ಛೇಡಿಸಿದ್ದಾರೆ.

ಅಲ್ಲದೆ ಈಗ ಗ್ರಾಮೀಣ ಭಾಗದಲ್ಲಿ ತುಂಬಾ ಸಮಸ್ಯೆ ಆಗಿದೆ. ಕೂಡಲೇ ನೌಕರರ ಬೇಡಿಕೆ ಈಡೇರಿಸುವ ಮೂಲಕ ಸಮಸ್ಯೆ ಪರಿಹಾರ ಮಾಡಿ ಎಂದು ಆಗ್ರಹಿಸಿದ್ದಾರೆ.

Megha
the authorMegha

Leave a Reply

error: Content is protected !!