ಜಮೀನಿನ ಪೈಪ್ಲೈನ್ ತೆರವು ಸಂಬಂಧ ಮಹಿಳೆಯ ಬೆತ್ತಲೆಗೊಳಿಸಿ 20 ಜನರಿಂದ ಹಲ್ಲೆ: ಎಫ್‌ಐಆರ್ ದಾಖಲು
ಬೆಳಗಾವಿ: ಮಗ ಮಾಡಿದ ತಪ್ಪಿಗೆ ತಾಯಿಯನ್ನು ಬೆತ್ತಲೆಗೊಳಿಸಿದ್ದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಪೈಪ್ಲೈನ್ ತೆರವು ಸಂಬಂಧ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ 20 ಜನರಿದ್ದ ಗುಂಪು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮವೊಂದರ ಮಹಿಳೆ ತನ್ನ ಜಮೀನಿನಲ್ಲಿ ಹಾದು ಹೋಗಿದ್ದ ಪೈಪ್ ಲೈನ್ ತೆರವು ಮಾಡುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೇರಿ ಸದಸ್ಯರಿಗೆ ಮನವಿ ಮಾಡಿದ್ದರು. ಪೈಪ್ ಲೈನ್ ತೆರವು ಮಾಡದೇ ಒಂಟಿಯಾಗಿರುವ ಮಹಿಳೆಯನ್ನು ಟಾರ್ಗೆಟ್ ಮಾಡಿ ಆಗಾಗ ಕ್ಯಾತೆ ತೆಗೆಯುತ್ತಿದ್ದರು. ಕಳೆದ 10 ದಿನಗಳ ಹಿಂದೆ ಈ ಬಗ್ಗೆ ಕೇಳಲು ಹೋದಾಗ ಮಹಿಳೆಯನ್ನು ಬೆತ್ತಲೆಗೊಳಿಸಿ ಪಂಚಾಯತಿ ಅಧ್ಯಕ್ಷ ಸೇರಿ ಇತರೆ ಸದಸ್ಯರು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಈ ಸಂಬಂಧ ನ್ಯಾಯ ಕೇಳಿ ಬೈಲಹೊಂಗಲದ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದಾಗ ಪೊಲೀಸರು ಕೇಸ್ ದಾಖಲಿಸಿಕೊಂಡಿಲ್ಲ. ಹೀಗಾಗಿ ಸಂತ್ರಸ್ತ ಮಹಿಳೆ ಬೆಳಗಾವಿಯ ಎಸ್ಪಿ ಕಚೇರಿಗೆ ತೆರಳಿ ಭೀಮಾಶಂಕರ್ ಗುಳೇದ್ರನ್ನು ಭೇಟಿ ಮಾಡಿದ್ದಾರೆ. ಅಧಿಕಾರಿ ಬಳಿ ತನ್ನ ಮೇಲೆ ಆದ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಎಸ್ಪಿ ಸೂಚನೆ ಮೇರೆಗೆ ಜಿಲ್ಲಾ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಲ್ಲಪ್ಪ ಡೊಂಕನ್ನವರ್, ಅಡಿವೆಪ್ಪ ದಳವಾಯಿ, ಕಲ್ಪನಾ ಡೊಂಕನ್ನವರ್, ಸಾಧಿಕ್, ಇಸ್ಮಾಯಿಲ್ ಸೇರಿ 20 ಜನರ ಮೇಲೆ ಐಪಿಸಿ 1860ರ ಅಡಿ 143, 147, 354 (a), 354 (b), 323, 324, 384, 201, 427, 342, 307, 504, 505, 149 ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.