ಮಂಡ್ಯ/ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಬಸ್ ಹತ್ತಿದ ಮಹಿಳೆಯರು ನಿರ್ವಾಹಕರಿಂದ ಉಚಿತ ಟಿಕೆಟ್ ಪಡೆದುಕೊಳ್ಳುವುದಕ್ಕೂ ಬೇಜವಾಬ್ದಾರಿ ತೋರಿಸುತ್ತಿದ್ದಾರೆ.
ಅಲ್ಲದೆ ನಮಗೆ ಉಚಿತವಲ್ಲವೇ ಟಿಕೆಟ್ ತೆಗೆದುಕೊಂಡರೇನೂ ಬಿಟ್ಟರೇನು ಎಂಬ ಉದಾಸೀನತೆಯಲ್ಲೇ ಕೆಲ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇಂಥ ಮಹಿಳೆಯರಿಂದ ಕಂಡಕ್ಟರ್ ದಂಡ ಕಟ್ಟುವುದು, ಮೆಮೋ ಪಡೆಯುವುದು ಜತೆಗೆ ಅಮಾನತಿನ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ನೋಡಿ ಸರ್ಕಾರ ಬಸ್‌ಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದನ್ನು ಉಪಯೋಗಿಸಿಕೊಳ್ಳಿ, ಆದರೆ ಕಂಡಕ್ಟರ್ ಅವರನ್ನು ಕೇಳಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿ, ಇದರಿಂದ ನಿಮ್ಮ ಪ್ರಯಾಣವು ಸುಖಕರವಾಗಿರುತ್ತದೆ ಜತೆಗೆ ನೀವು ದಂಡ ಕಟ್ಟುವುದು ತಪ್ಪುತ್ತದೆ. ಕಂಡಕ್ಟರ್‌ಗೂ ಮೆಮೋ ಪಡೆಯುವುದು ತಪ್ಪತ್ತದೆ.
ಅದನ್ನು ಬಿಟ್ಟು ಮಹಿಳಾ ಪ್ರಯಾಣಿಕರು ಬೇಜವಾಬ್ದಾರಿಯಿಂದ ಉಚಿತ ಟಿಕೆಟ್ ಪಡೆಯದೆ ನಿರ್ವಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ಇದು ಪ್ರತಿಯೊಬ್ಬ ಕಂಡಕ್ಟರ್ ಪರವಾಗಿ ವಿಜಯಪಥ ಮನವಿ ಮಾಡುತ್ತದೆ. ಕಾರಣ ನಿಮ್ಮಿಂದ ಎಷ್ಟು ನಿರ್ವಾಹಕರು ದಂಡ ಕಟ್ಟುತ್ತಿದ್ದಾರೆ, ಜತೆಗೆ ಅಮಾನತಿನ ಶಿಕ್ಷೆಗೂ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ನೀವೇ ಕೇಳಿ ಟಿಕೆಟ್ ಪಡೆಯಿರಿ, ಅವರಿಗೂ ನಿಮ್ಮಂತೆ ಕುಟುಂಬವಿದೆ ಎಂಬುದನ್ನು ಅರಿಯಿರಿ.
ನಿನ್ನೆ ಅಂದರೆ ಜು.29ರಂದು ಬೆಳಗ್ಗೆ 10.40ರ ಸಮಯದಲ್ಲಿ ಕಡೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಉಚಿತ ಟಿಕೆಟ್ ತೆಗೆದುಕೊಂಡಿಲ್ಲ. ಅಲ್ಲದೆ ಇದೇ ಬಸ್‌ನಲ್ಲಿ ತರೀಕೆರೆಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ಮತ್ತಿಬ್ಬರು ಮಹಿಳೆಯರು ಕೂಡ ಉಚಿತ ಟಿಕೆಟ್ ತೆಗೆದುಕೊಂಡಿಲ್ಲ.
ಅಂದರೆ ಕಡೂರಿನಿಂದ ಶಿವಮೊಗ್ಗಕ್ಕೆ 70 ರೂ. ಹಾಗೂ ತರೀಕೆರೆಯಿಂದ ಶಿವಮೊಗ್ಗಕ್ಕೆ 45 ರೂ. ಟಿಕೆಟ್ ದರದಂತೆ ಒಟ್ಟು 160 ರೂ.ಟಿಕೆಟ್‌ಅನ್ನು ಪ್ರಯಾಣಿಕರಿಗೆ ಕೊಟ್ಟಿಲ್ಲ ಎಂದು ನಿರ್ವಾಹಕನಿಗೆ ಭದ್ರಾವತಿ ಬಳಿ ತನಿಖಾ ಸಿಬ್ಬಂದಿ ಮೆಮೋ ನೀಡಿದ್ದಾರೆ.
ಟಿಕೆಟ್ ಪಡೆಯದ ಪ್ರಯಾಣಿಕರು ಹತ್ತುಪಟ್ಟು ದಂಡ ಕಟ್ಟಬೇಕು. ಅಂದರೆ 70 ರೂ. ಟಿಕೆಟ್ ಪಡೆಯದ ಮಹಿಳೆಗೆ 700 ರೂ. ದಂಡ ಮತ್ತು ತಲಾ 45 ರೂ. ಟಿಕೆಟ್ ಪಡೆಯದ ಇಬ್ಬರು ಮಹಿಳೆಯರಿಗೆ 900 ರೂ. ದಂಡ ವಿಧಿಸಲಾಗಿದೆ. ಆ ದಂಡವನ್ನು ಮಹಿಳಾ ಪ್ರಯಾಣಿಕರು ಕಟ್ಟಿದ್ದಾರೆ.
ಇದರ ಜತೆಗೆ ಕಂಡಕ್ಟರ್ ಅವರಿಗೂ ಕೂಡ ಮೆಮೋ ನೀಡಿದ್ದು, ಇದು ಗಂಭೀರ ಪ್ರಕರಣ ಎಂದು ಒಂದು ವೇಳೆ ಶಿಸ್ತುಪಾಲನಾಧಿಕಾರಿಗಳು ಪರಿಗಣಿಸಿದರೆ ಕಂಡಕ್ಟರ್ ಅಮಾನತಾಗುತ್ತಾರೆ. ಹೀಗಾಗಿ ಪ್ರಯಾಣಿಕರು ಕೇಳಿ ಟಿಕೆಟ್ ಪಡೆಯಿರಿ. ಇದರಿಂದ ನೀವು ದಂಡದಿಂದ ಪಾರಾಗುವ ಜತೆಗೆ ಕಂಡಕ್ಟರ್‌ಗೆ ಅಮಾನತಿನ ಶಿಕ್ಷೆಯಿಂದ ತಪ್ಪಿಸಿದಂತಾಗುತ್ತದೆ.
ನಾವು ಉಚಿತವಾಗಿ ಪ್ರಯಾಣಿಸಬಹುದು ಎಂದು ನಿರ್ವಾಹಕರು ಬಂದಾಗ ಅವರಿಂದ ಟಿಕೆಟ್ ಪಡೆಯದೆ ಹೋದರೆ ಅವರಿಗೆ ಶಿಸ್ತು ಕ್ರಮದ ಜತೆಗೆ ದಂಡವನ್ನು ವಿಧಿಸುತ್ತಾರೆ ತನಿಖಾಧಿಕಾರಿಗಳು. ಹೀಗಾಗಿ ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಮಹಿಳೆಯರು ಉಚಿತ ಟಿಕೆಟ್ ಪಡೆದೇ ಪ್ರಯಾಣಿಸಿ.
ಇನ್ನು ಕಳೆದ ಜೂನ್ 19ರಂದು ಕನಕಗಿರಿಯಿಂದ ಮಲ್ಲಾಪುರಂವರೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಎಲ್ಲಿಗೆ ಪ್ರಯಾಣಿಸುತ್ತಿದ್ದೇವೆ ಎಂದು ಹೇಳದೆ, ನಿರ್ವಾಹಕರಿಂದ ಟಿಕೆಟ್ ಪಡೆದಿರಲಿಲ್ಲ. ಆ ನಿರ್ವಾಹಕನ ದುರಾದೃಷ್ಟಕ್ಕೆ ಅಂದು ತನಿಖಾಧಿಕಾರಿಗಳು ತಪಾಸಣೆಗೆ ಬಸ್ ಹತ್ತಿದ್ದು, ಕನಕಗಿರಿಯಿಂದ ಮಲ್ಲಾಪುರಂಗೆ ಪ್ರಯಾಣಿಸುತ್ತಿದ್ದ ಮಹಿಳೆ ಉಚಿತ ಟಿಕೆಟ್ ಪಡೆದುಕೊಂಡಿಲ್ಲದ್ದಕ್ಕೆ ಆಕೆಗೆ 15 ರೂ. ಉಚಿತ ಟಿಕೆಟ್‌ಗೆ 150 ರೂ.ದಂಡ ಕಟ್ಟಿಸಿದ್ದಾರೆ.
ಈ ವೇಳೆ 15 ರೂಪಾಯಿಯ ಒಂದು ಉಚಿತ ಟಿಕೆಟ್ ನೀಡುವಲ್ಲಿ ನೀವು ವಿಫಲರಾಗಿದ್ದೀರಿ ಎಂದು ತನಿಖಾಧಿಕಾರಿಗಳು ನಿರ್ವಾಹಕರಿಗೂ ದಂಡ ಹಾಕಿದ್ದು ಮೆಮೋ ನೀಡಿದ್ದಾರೆ. ಇಲ್ಲಿ ನಿರ್ವಾಹಕರು ಯಾವುದೆ ಹಣ ಪಡೆಯದಿದ್ದರೂ ಮಹಿಳೆಯರು ಮಾಡಿದ ತಪ್ಪಿಗೆ ದಂಡ ಕಟ್ಟುವ ಜತೆಗೆ ಮೆಮೋ ಕೂಡ ಪಡೆದು ಅದಕ್ಕೆ ಉತ್ತರ ನೀಡಬೇಕು. ಇನ್ನು ಅಧಿಕಾರಿಗಳು ನಿರ್ವಾಹಕ ಕೊಟ್ಟಿರುವ ಉತ್ತರ ಸಮಂಜಸವಾಗಿಲ್ಲ ಎಂದು ಅಮಾನತು ಮಾಡುತ್ತಾರೆ.
ಇದನ್ನು ನೋಡಿದರೆ ಅತ್ತ ಪುಲಿ ಇತ್ತ ದರಿ ಎಂಬಂತಹ ಸ್ಥಿತಿಯಲ್ಲಿ ನಿರ್ವಾಹಕರು ಸಿಲುಕಿಕೊಂಡಿದ್ದು ಒಂದು ರೀತಿ ಗರಗಸದ ಬಾಯಿಗೆ ಸಿಲುಕಿ ಒದ್ದಾಡುವ ಸ್ಥಿತಿಯಲ್ಲಿ ಇದ್ದಾರೆ. ಕೆಲ ಮಹಿಳೆಯರು ಉದಾಸೀನತೆಯಿಂದ ನಡೆದುಕೊಂಡು ನಿರ್ವಾಹಕರಿಗೆ ಕಿರಿಕಿರಿಯುಂಟು ಮಾಡುವುದರ ಜತೆಗೆ ತಾವು ದಂಡಕಟ್ಟುವುದಲ್ಲದೇ ಕಂಡಕ್ಟರ್ ಕೆಲಸಕ್ಕೂ ಕುತ್ತು ತರುತ್ತಿದ್ದಾರೆ.