
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದ್ದು, ಇದುವರೆಗೆ 1,08,203 ಮಕ್ಕಳ ಪೈಕಿ ಶಾಲೆಯಿಂದ ಹೊರಗುಳಿದ 6,936 ಮಕ್ಕಳನ್ನು ಗುರುತಿಸಲಾಗಿದೆ ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ರವರು ತಿಳಿಸಿದರು.
ಬಿಬಿಎಂಪಿಯ ಎಂಟೂ ವಲಯಗಳ ಜಂಟಿ ಆಯುಕ್ತರನ್ನು ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷಾ ಕಾರ್ಯಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಅದರಂತೆ ಎಲ್ಲಾ ವಲಯಗಳಲ್ಲಿ ವಾರ್ಡ್ ವಾರು ಸಿಬ್ಬಂದಿಗಳನ್ನು ನಿಯೋಜಿಸಿ ಸಮೀಕ್ಷಾ ಕಾರ್ಯವನ್ನು ನಡೆಸಲಾಗುತ್ತಿದೆ.
ಸಂವಿಧಾನದ ಕಲಂ21(ಎ) ಪ್ರಕಾರ 6 ರಿಂದ 14 ವರ್ಷದ ಪ್ರತಿ ಮಗು 8 ವರ್ಷಗಳ ಕಾಲ ಶಾಲಾ ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕಾಗಿರುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ‘ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು, 2012’ ರನ್ವಯ ಸ್ಥಳೀಯ ಸಂಸ್ಥೆಗಳು ಶಿಕ್ಷಣ ರಿಜಿಸ್ಟರ್ ಅನ್ನು ನಿರ್ವಹಿಸಬೇಕಾಗಿರುತ್ತದೆ.
ಮುಂದುವರಿದು, ‘ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು(ತಿದ್ದುಪಡಿ) ನಿಯಮಗಳು, 2014’ ರನ್ವಯ ಮಕ್ಕಳ ಹಾಜರಾತಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸಲಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳು ಶಾಲೆಗೆ ದಾಖಲಾಗದ ಮಕ್ಕಳ ಕುರಿತು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಸಂಬಂಧ, ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ನಿಖರ ಸಂಖ್ಯೆಯನ್ನು ಗುರುತಿಸುವ ಕಾರ್ಯ ಪ್ರಕ್ರಿಯೆಯಲ್ಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವಿಕೆ ಸಮೀಕ್ಷೆ ಕಾರ್ಯವನ್ನು, ಸೆಂಟರ್ ಫಾರ್ ಇ-ಗವರ್ನೆನ್ಸ್ ಇಲಾಖೆ ವತಿಯಿಂದ ‘ಕರ್ನಾಟಕ ಸರ್ಕಾರ ಆಪ್ ತಾಣ’ದಲ್ಲಿರುವ ‘ಕರ್ನಾಟಕ ಹೆಚ್2ಹೆಚ್ ಮಕ್ಕಳ ಸಮೀಕ್ಷೆ ಅಪ್ಲಿಕೇಶನ್’ (Karnataka H2H Children Survey App) ಎಂಬ ಮೊಬೈಲ್ ಆಪ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ.
24ನೇ ಫೆಬ್ರಬರಿ 2025 ರಿಂದ ಸಮೀಕ್ಷೆ ಆರಂಭ: ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವಂತಹ ಎಲ್ಲಾ ಮನೆಗಳನ್ನು ಉಚ್ಛ ನ್ಯಾಯಾಲಯದ ನಿರ್ದೇಶನದಂತೆ 24ನೇ ಫೆಬ್ರಬರಿ 2025ರಿಂದ ಪಾಲಿಕೆಯ ಎಂಟು ವಲಯಗಳಲ್ಲಿ ಶಿಕ್ಷಣ ವಿಭಾಗದ ಹೊಲಿಗೆ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಲಿಂಕ್ ವರ್ಕರ್ಸ್ ಗಳ ಮೂಲಕ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತಿ ವಾರ್ಡ್ ಗೆ ಸುಮಾರು 10 ಗಣತಿದಾರರನ್ನು ನೇಮಿಸಲಾಗಿದ್ದು, ಸದರಿ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಿ 6 ರಿಂದ 18 ವರ್ಷದ ವಯಸ್ಸಿನ ಎಲ್ಲರನ್ನೂ ಸಮೀಕ್ಷೆ ನಡೆಸಿ ಆಪ್ ನಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ.
ಶಾಲೆಯಿಂದ ಹೊರಗುಳಿದ 6,936 ಮಕ್ಕಳ ಗುರುತು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 8 ವಲಯಗಳಲ್ಲಿಯೂ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವಿಕೆ ಸಮೀಕ್ಷಾ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ. ಪಾಲಿಕೆಯ 8 ವಲಯಗಳಲ್ಲಿ 10ನೇ ಮಾರ್ಚ್ 2025 ರವರೆಗೆ 1,08,203 ಮಕ್ಕಳ ಪೈಕಿ, ಶಾಲೆಯಿಂದ ಹೊರಗುಳಿದ 6,936 ಮಕ್ಕಳನ್ನು ಗುರುತಿಸಲಾಗಿದೆ. ಶೀಘ್ರ ಎಲ್ಲಾ ಮನೆ-ಮನೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಈ ಸಮೀಕ್ಷಾ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಲು ಕೋರಿದೆ.