ಮೈಸೂರು: ನಾಡ ಹಬ್ಬ ವಿಶ್ವವಿಖ್ಯಾತ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಮಧ್ಯಾಹ್ನ 1.41 ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಿತು. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. 750 ಕೆಜಿಯ ಅಂಬಾರಿಯಲ್ಲಿ ಚಾಮುಂಡಿದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಅಭಿಮನ್ಯು ಬನ್ನಿ ಮಂಟಪದತ್ತ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದನು.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯೊಂದಿಗೆ ಕಳೆದ ಹತ್ತು ದಿನಗಳಿಂದ ಸಾಂಪ್ರದಾಯಿಕವಾಗಿ ನಡೆದ ನಾಡಹಬ್ಬಕ್ಕೆ ತೆರೆ ಬೀದಿದೆ. ಈ ವೇಳೆ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಸಾಂಸ್ಕೃತಿಕ ನಗರಿಯತ್ತ ಧಾವಿಸಿದ್ದರು.
ಇನ್ನು, ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯುವಿಗೆ ಲಕ್ಷ್ಮೀ, ಹಿರಣ್ಯ ಕುಮ್ಕಿ ಆನೆಗಳಾಗಿ ಸಾಥ್ ನೀಡಿದರೆ, ಧನಂಜಯ ನಿಶಾನೆ ಆನೆಯಾಗಿ, ಗೋಪಿ, ನೌಫತ್ ಆನೆಯಾಗಿದ್ದು 9 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಿದವು.
4 ದಶಕಗಳ ಭವ್ಯ ಇತಿಹಾಸ: 1610ರಲ್ಲಿ ಆರಂಭಗೊಂಡ ದಸರಾ ಮಹೋತ್ಸವಕ್ಕೆ 4 ದಶಕಗಳ ಭವ್ಯ ಇತಿಹಾಸವಿದೆ. ಮೈಸೂರು ದಸರಾ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಚಿರಪರಿಚಿತ ಹಾಗೂ ಪ್ರಖ್ಯಾತಿ ಪಡೆದಿದೆ.
ಈ ಬಾರಿ ಮಳೆ ಬಂದ ಕಾರಣಕ್ಕೆ ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ವರ್ಷ ಅತ್ಯಂತ ಸಡಗರ ಸಂಭ್ರಮದಿಂದ ದಸರಾ ದಿಬ್ಬಣ ನೆರವೇರಿತು. ಸಾಲಂಕೃತ ಗಜಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊತ್ತು ಮೈಸೂರಿನ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿದನು.
ಬೆಳಗ್ಗೆಯಿಂದಲೂ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಂಪ್ರದಾಯ ಬದ್ಧ ಕಾರ್ಯಕ್ರಮಗಳು ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಹೋದ್ಯೋಗಿಗಳ ಜತೆಗೆ ಆಗಮಿಸಿ ಮಧ್ಯಾಹ್ನ ನಂದಿ ಧ್ವಜಕ್ಕೆ ಪೂಜೆ ಮಾಡುವ ಮೂಲಕ ದಸರಾ ದಿಬ್ಬಣಕ್ಕೆ ಚಾಲನೆ ನೀಡಿದರು.
140ಕ್ಕೂ ಹೆಚ್ಚು ಕಲಾತಂಡ ಹಾಗೂ 51 ಸ್ತಬ್ಧ ಚಿತ್ರ: ವಿವಿಧ ಜಿಲ್ಲೆಗಳ ಕಲಾತಂಡಗಳು, ಕಿಲುಕುದುರೆ, ಗೊರವರ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಕೀಲುಗೊಂಬೆ, ಮರಗಾಲು, ವೀರಗಾಸೆ, ಹಾಡಿ ಮಕ್ಕಳ ಕುಣಿತ ಸೇರಿ 140ಕ್ಕೂ ಹೆಚ್ಚು ಕಲಾ ತಂಡಗಳು ಹಾಗೂ 51 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಇನ್ನು, ಜಂಬೂ ಸವಾರಿ ನಿಮಿತ್ತ ನಗರದಾದ್ಯಂತ ಬಿಗಿ ಪೊಲೀಸ್ ಬದೋಬಸ್ತ್ ಮಾಡಿ ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿತ್ತು.
ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆ ಕಲಾ ತಂಡಗಳ ಹಾಗೂ ಟ್ಯಾಬ್ಲೋಗಳ ಮೆರವಣಿಗೆ ಆರಂಭವಾಯಿತು. ಕೀಲುಗೊಂಬೆ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಹೀಗೆ ಹತ್ತು ಹಲವು ಬಗೆಯ ಕಲಾ ಪಾಂಡಿತ್ಯ ಪ್ರದರ್ಶನಗೊಂಡಿತು. ಸ್ತಬ್ಧ ಚಿತ್ರಗಳ ಯಾತ್ರೆಯಲ್ಲಂತೂ ಈ ಬಾರಿ ಸರ್ಕಾರದ ಐದು ಗ್ಯಾರಂಟಿಗಳ ಟ್ಯಾಬ್ಲೋ ವಿಶೇಷ ಸ್ಥಾನ ಪಡೆದವು. ಪೊಲೀಸ್ ಬ್ಯಾಂಡ್ ಸಹ ವೀಕ್ಷಕರಿಗೆ ಮುದ ನೀಡಿತು.
7ನೇ ಬಾರಿಗೆ ಅಂಬಾರಿ ಹೊತ್ತ ಅಭಿಮನ್ಯುಗೆ ನಿಶಾನೆ ಆನೆಯಾಗಿ ನೌಫತ್ ಮತ್ತು ಸಾಲಾನೆಯಾಗಿ ಗೋಪಿ, ಧನಂಜಯ, ಮಹೇಂದ್ರ, ಭೀಮ, ಪ್ರಶಾಂತ್ ಸಾಥ್ ನೀಡಿದರೆ, ವರಲಕ್ಷ್ಮೀ ಮತ್ತು ವಿಜಯಾ ಎಂಬ ಹೆಣ್ಣಾನೆಗಳು ಕುಮ್ಕಿ ಆನೆಗಳ ಪಾತ್ರವಹಿಸಿದವು.
ಈ ಬಾರಿ ಅರಮನೆ ಆವರಣ ದಾಟಿದ ಜಂಬೂ ಸವಾರಿ ರಾಜಪಥದಲ್ಲಿ ಸಾಗಿ ದಸರಾ ಮೆರಗು ಹೆಚ್ಚಿಸಿತು. ಲಕ್ಷಾಂತರ ಮಂದಿ ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು. ಸುಮಾರು 40 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಬಾರಿ ನೀರಿಕ್ಷೆಗೂ ಮೀರಿ ಜನ ಸೇರಿದ್ದರು.