ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳ ತೆರಿಗೆ ವಂಚನೆಯಲ್ಲಿ ನೇರವಾಗಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದ್ದಾರೆ.
ಟೋಟಲ್ ಸ್ಟೇಷನ್ ಸರ್ವೆಯ ನಂತರ ವಾಣಿಜ್ಯ ಕಟ್ಟಡಗಳ ತೆರಿಗೆಯನ್ನು ಕಾನೂನು ಬಾಹಿರವಾಗಿ ಪಾಲಿಕೆಯ ಅಧಿಕಾರಿಗಳು ಕಡಿತ ಮಾಡಿದ್ದಾರೆ. ಪೂರ್ವ, ಯಲಹಂಕ, ಬೊಮ್ಮನಹಳ್ಳಿ, ದಕ್ಷಿಣ, ಮಹದೇವ, ಪುರವಲಯಗಳಲ್ಲಿ 105 ವಾಣಿಜ್ಯ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ನಡೆಸಿ ಇವುಗಳಲ್ಲಿ ಪೂರ್ವ ವಲಯದ 9 ಹಾಗೂ ಬೊಮ್ಮನಹಳ್ಳಿಯ 2 ಆಸ್ತಿಗಳಿಗೆ ಹಿಂದಿನ ಜಂಟಿ ಆಯುಕ್ತರು ತೆರಿಗೆ ಕಡಿತ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ನಿಯಮಕ್ಕೆ ವಿರುದ್ಧವಾಗಿ ತೆರಿಗೆ ಕಡಿತ ಮಾಡಿರುವುದರಿಂದ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ. ಕಡಿತ ಮಾಡಿರುವ ಆಸ್ತಿಗಳಿಂದ 321.83 ಕೋಟಿ ರೂಪಾಯಿ ಪಾಲಿಕೆಗೆ ಬರಬೇಕಿತ್ತು ಎಂದು ಹೇಳಿದ್ದಾರೆ.
ನಿಯಮಗಳನ್ನು ಗಾಳಿಗೆ ತೂರಿ ತೆರಿಗೆ ಕಡಿತ ಮಾಡುವ ಮೂಲಕ ಅಧಿಕಾರಿಗಳು ಕೋಟ್ಯಂತರ ರೂಪಾಯಿಗಳ ಅಕ್ರಮವೆಸಗಿದ್ದಾರೆ, ಪಾಲಿಕೆ ಇದರ ಬಗ್ಗೆ ಪರಿಶೀಲನೆ ನಡೆಸಲು ನೇಮಿಸಿದ್ದ ಉಪಸಮಿತಿಯ ವರದಿ ಅಪೂರ್ಣವಾಗಿದ್ದು ಮುಂದೆ ಬಿಬಿಎಂಪಿ ನಡೆಸುವ ತನಿಖೆಗಳ ವಿಶ್ವಾಸಾರ್ಹತೆಯು ಪ್ರಶ್ನಾರ್ಹವೇ ಆಗಿದೆ ಎಂದು ದೂರಿದ್ದಾರೆ.
ಭ್ರಷ್ಟಾಚಾರ ನಡೆಸಿರುವ ಅಧಿಕಾರಿಗಳು ಇಂದು ಮುಕ್ತವಾಗಿ ಪ್ರಭಾವಿ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಸುತ್ತಮುತ್ತವೇ ಓಡಾಡಿಕೊಂಡಿದ್ದಾರೆ. ಇವರಿಗೆ ಕಾನೂನಿನ ಭಯವಿಲ್ಲವೆಂದು ತೋರುತ್ತಿದೆ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಅಕ್ರಮವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕಾಗಿ ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ.
ಈ ಬಗ್ಗೆ ಪಕ್ಷದಿಂದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣವನ್ನು ದಾಖಲು ಮಾಡಲಾಗುವುದೆಂದು ಮೋಹನ್ ದಾಸರಿ ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)